ಅವನತಿಯತ್ತ ಐತಿಹಾಸಿಕ ಬೃಹತ್ ಕೆರೆ

0
35
loading...

ಎಫ್.ಎಸ್.ಸಿದ್ದನಗೌಡರ
ಬೈಲಹೊಂಗಲ: ಜನಪ್ರತಿನಿಧಿಗಳ, ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಪಟ್ಟಣದ ಐತಿಹಾಸಿಕ ದೊಡ್ಡ ಕೆರೆ ಸೌಂದರ್ಯ ಕಳೆದುಕೊಳ್ಳುವುದರ ಜೊತೆಗೆ ಗಬ್ಬೆದ್ದು ನಾರುತ್ತಿದ್ದು, ಸ್ಥಳಿಯ ಸಾರ್ವಜನಿಕರು ಅಲ್ಲಿನ ದುರ್ವಾಸನೆಯಿಂದ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಗಂಡು ಮೆಟ್ಟಿನ ನಾಡು ಬೈಲಹೊಂಗಲದಲ್ಲಿ ಶತಮಾನಗಳ ಹಿಂದೆ ಪಶು, ಪಕ್ಷಿ, ಜನ, ಜಾನುವಾರಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣವಾದ ಪುರಾತನ ಕಾಲದ ಹಳೇ ಹಣಮಂತ ದೇವಸ್ಥಾನ ಹಿಂಭಾಗದಲ್ಲಿ, 12 ನೇ ಶತಮಾನದ ಬಸವಾದಿಶರಣ ಬೋವಿವಡ್ಡರ ಸಮಾಜದ ಸಿದ್ದರಾಮೇಶ್ವರವರ ವಚನಗಳ ಪ್ರೇರಣೆಯಿಂದ ಮಲ್ಲನಾಯ್ಕ ಲಿಂಗನಾಯ್ಕ ಪಾಟೀಲ ಇವರು ಅಂದಾಜು 30 ಎಕರೆ ಜಮೀನಲ್ಲಿ ಬೃಹತ ಕೆರೆ ನಿರ್ಮಾಣ ಮಾಡಿ ಅರ್ಧ ಭಾಗ ಜನತೆಗೆ, ಇನ್ನೊಂದು ಭಾಗ ದನ ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಒಬ್ಬ ಕಾವಲುಗಾರನನ್ನು ನೇಮಕ ಮಾಡಿ, ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿಕೊಂಡ ಬಂದ ಇವರನ್ನು ಬ್ರೀಟಿಷರ ಅಧಿಕಾರಿಗಳು “ರಾವ ಬಹಾದ್ದೂರ” ಎಂಬ ಬಿರುದು ನೀಡಿದ್ದರು. ಇವರು ನಿರ್ಮಿಸಿದ ಕೆರೆಯು ಇಂದು ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ದುಸ್ಥಿತಿಗೆ ಒಳಗಾಗಿದೆ.
ಮಳೆ ನೀರು ಸಂಗ್ರಹ, ಅಂತÀರ್ಜಲ ಪುನಚ್ಚೇತನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಹಣ ವೆಚ್ಚು ಮಾಡಿ ಅತೀಕ್ರಮಣವಾದ ಕೆರೆಗಳನ್ನು ಪುನರಜ್ಜೀವನಗೊಳಿಸುವಾಗ ಇದ್ದ ಕೆರೆಯನ್ನು ಅಭಿವೃದ್ದಿ ಪಡಿಸಲು ಸರ್ಕಾರ ಹಣ ನೀಡಲು ಮುಂದೆ ಬಂದರೂ ಪುರಸಭೆ ಅಧಿಕಾರಿಗಳ ಬೇಜವಾಬ್ದರಿ ಯಿಂದ ಕೆರೆಯ ಅಭಿವೃದ್ದಿ ನೆನೆಗುದಿಗೆ ಬಿದ್ದಿರುವುದು ಪ್ರಜ್ಞಾವಂತ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಕೆರೆಯ ಪಕ್ಕದ ರಸ್ತೆಯ ಮೇಲ್ಬಾಗದ ಓಣಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಚರಂಡಿ ನೀರು ಹಲವಾರು ವರ್ಷಗಳಿಂದ ಹರಿದು ಕೆರೆಗೆ ಸೇರುತ್ತಿದೆ. ಗಟಾರು ನಿರ್ಮಾಣ ಮಾಡಿದಾಗಿನಿಂದ ಸ್ವಚ್ಚತೆಯನ್ನು ಕಂಡಿಲ್ಲ. ಅಲ್ಲದೇ ಕೆರೆಗೆ ಹೊಂದಿಕೊಂಡ ಕಲ್ಯಾಣಮಂಟಪದ ತ್ಯಾಜ್ಯ, ಅಟೋಮೊಬೈಲ್, ಸರ್ವಿಸ್ ಸೆಂಟರ್ ಗಳ ಆಯಿಲ್ ಮಿಶ್ರಿತ ತ್ಯಾಜ್ಯ ನೀರು, ಸತ್ತ ಹಂದಿ, ನಾಯಿಗಳನ್ನು ಚಲ್ಲುವದರಿಂದ ಕೆರೆಯಲ್ಲಿರುವ ಜಲಚರ, ಸಸ್ಯಸಂಕುಲ ಹಾಳಾಗುವದರೊಂದಿಗೆ ಕೆರೆಯ ತುಂಬೆಲ್ಲ ಹಸಿರು ಪಾಚಿ ಬೆಳೆದು ನಿಂತಿದೆ. ಜಾನುವಾರಗಳ ಕುಡಿಯುವ ನೀರಿಗೆ ಆಶ್ರಿತವಾದ ಏಕೈಕ ಕೆರೆ ಇಂದು ರೈತರಿಗೆ, ಜಾನುವಾರಗಳಿಗೆ ಸಾಂಕ್ರಮಿಕ ರೋಗ ಹರಡುವ ಭೀತಿ ಇದ್ದರೂ ಪರಿಸರ ಇಲಾಖೆ ಕಣ್ಣುಮುಚ್ಚಿ ಕುಳಿತಿರುವದಕ್ಕೆ ನಾಗರೀಕರು ಅಕ್ರೋಶ ವ್ಯಕ್ತಪಡಿಸುವಂತಾಗಿದೆ.

ಮಳೆ ನೀರಿನಿಂದ ತುಂಬಿದ ಕೆರೆ ನಂತರ ಕೊಡಿಯ ಮೂಲಕ ಹರಿಯುವ ನೀರಿನ ಸೌಂದರ್ಯ ನೋಡುವುದೇ ಪಟ್ಟಣದ ಜನತೆಗೆ ಒಂದು ಭಾಗ್ಯವಾಗಿತ್ತು, ಇಂದು ಆ ಭಾಗ್ಯ ಜನತೆಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸೌಂದರ್ಯಿಕರಣ ಸಿಮೆಂಟ್, ಡಾಂಬರೀಕರಣ ರಸ್ತೆ, ಉದ್ಯಾನವನಗಳನ್ನು ಕೃತಕವಾಗಿ ನಿರ್ಮಾಣ ಮಾಡುವುದೇ ಅಭಿವೃದ್ದಿ ಪರಿಕಲ್ಪನೆ ಅಲ್ಲ. ಈ ಸಮಸ್ಯೆಗಳಿಗೆ ಪರಿಹಾರವೇ ನೀರಿನ ಸಂಗ್ರಹ. ಇದನ್ನು ಅರಿತು ಸರ್ಕಾರ ಕೆರೆ ಅಭಿವೃದ್ದಿಗೊಸ್ಕರ ಹತ್ತಾರು ವರ್ಷಗಳ ಹಿಂದೆ ಕೋಟ್ಯಾಂತರ ರೂ ಬಿಡುಗಡೆ ಮಾಡಿದ್ದರು ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಯೋಜನೆಗಳನ್ನು ರೂಪಿಸಿದ ಕಾರಣ ಕೆರೆಯ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಗೊಂಡ ರೂ.85 ಲಕ್ಷ ಅನುದಾನ ಸ್ಥಗಿತವಾಗಿರುವುದು ಕೆರೆಯ ದುರ್ದೈವವಾಗಿದೆ. ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸುವ ಕೆರೆಯ ಅಭಿವೃದ್ದಿ, ಅಧಿಕಾರಿಗಳ ಆಲಷ್ಯತನದಿಂದ ಮರಿಚಿಕೆಯಾಗಿ ಉಳಿದಿದೆ. ಕೆರೆಯ ಸ್ವಚ್ಚತೆಗೆ ಮಹತ್ತರ ಜವಾಬ್ದಾರಿ ಹೊತ್ತಿರುವ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಗ್ರವಾಗಿ ಅಭಿವೃದ್ದಿ ಪಡಿಸುತ್ತಾರೆ ಎಂದು ಜನತೆ ಜಾತಕ ಪಕ್ಷಿಗಳಂತೆ ಕಾದುನೋಡುವಂತಾಗಿದೆ.

loading...