ಅಸಾರಾಂ ಬಾಪುಗೆ ಜೈಲು ಶಿಕ್ಷೆ

0
12
loading...

ಜೋಧ್ಪುರ್-ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು(77) ದೋಷಿ ಎಂದು ರಾಜಸ್ತಾನದ ಜೋಧ್ಪುರ್ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. 12 ವರ್ಷಗಳ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ಕಾನೂನಿಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ ನಂತರ ನ್ಯಾಯಾಲಯವೊಂದರಿಂದ ಆರೋಪಿಯನ್ನು ದೋಷಿ ಎಂದು ಘೋಷಿಸಿದ ಪ್ರಥಮ ಪ್ರಕರಣ ಇದಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ತೀರ್ಪನ್ನು ವಿಶೇಷ ನ್ಯಾಯಾಲಯದ(ಎಸ್ಟಿ/ಎಸ್ಟಿ ನ್ಯಾಯಾಲಯ) ನ್ಯಾಯಾಧೀಶ ಮಧುಸೂದನ್ ಶರ್ಮ ಇಂದು ಪ್ರಕಟಿಸಿ, ಅಸಾರಾಂ ಬಾಪು ಸಹಿತ ಮೂವರು ಆರೋಪಿಗಳನ್ನು ದೋಷಿ ಎಂದು ಘೋಷಿಸಿದರು.
ತೀರ್ಪು ಹಿನ್ನೆಲೆಯಲ್ಲಿ ರಾಜಸ್ತಾನದ ಜೋಧ್ಪುರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿದ್ದು, ನಿಷೇಧಾಜ್ಞೆ ಆದೇಶ ಜಾರಿಗೊಳಿಸಲಾಗಿದೆ. ರಾಜಸ್ತಾನ ಹೈಕೋರ್ಟ್ ನಿರ್ದೇಶನಗಳಂತೆ ಜೋಧ್ಪುರ್ ಕೇಂದ್ರ ಕಾರಾಗೃಹದ ಆವರಣದಲ್ಲಿ ವಿಚಾರಣಾ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ. ಅಸಾರಾಂ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಶೀಘ್ರ ಪ್ರಕಟವಾಗಲಿದೆ. ಅಸಾರಾಂನ ಅಪಾರ ಬೆಂಬಲಿಗರು ಮತ್ತು ಅನುಯಾಯಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಆತಂಕವಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕೆಲವರನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ, ಬಾಪು ಬೆಂಬಲಿಗರು ಅಧಿಕ ಸಂಖ್ಯೆಯಲ್ಲಿರುವ ರಾಜಸ್ತಾನ್, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲೂ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಶಹಜಾನ್ಪುರದಲ್ಲಿರುವ ಸಂತ್ರಸ್ತೆಯ ಮನೆ ಮತ್ತು ಕುಟುಂಬ ವರ್ಗದವರಿಗೂ ರಕ್ಷಣೆ ನೀಡಲಾಗಿದೆ. ಮಧ್ಯಪ್ರದೇಶದ ಚಿಂಡ್ವಾರಾದಲ್ಲಿನ ಅಸಾರಾಂನ ಆಶ್ರಮದಲ್ಲಿ ಓದುತ್ತಿದ್ದ ಉತ್ತರಪ್ರದೇಶದ ಶಹಜಾನ್ಪುರ್ನ 16ರ ಬಾಲಕಿ ತನ್ನ ಮೇಲೆ ಬಾಬಾ ಆಗಸ್ಟ್ 15, 2013ರಲ್ಲಿ ಅತ್ಯಾಚಾರ ಎಸಗಿದ್ದ ಎಂದು ದೂರು ನೀಡಿದ್ದಳು. ಮಧ್ಯಪ್ರದೇಶದ ಇಂದೋರ್ನಲ್ಲಿ ಅಸರಾಂನನ್ನು ಬಂಧಿಸಿ ಸೆ.1ರಂದು ಜೋಧ್ಪುರ್ಗೆ ಕರೆತರಲಾಗಿತ್ತು. ಸೆಪ್ಟೆಂಬರ್ 2, 2013ರಿಂದಲೂ ಸ್ವಯಂಘೋಷಿತ ದೇವಮಾನವ ನ್ಯಾಯಾಂಗ ವಶದಲ್ಲಿದ್ದಾನೆ. ಜಾಮೀನು ಕೋರಿ ಈತ ಸಲ್ಲಿಸಿದ್ದ 12 ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಿರಸ್ಕರಿಸಿದ್ದವು. ಈ ಪ್ರಕರಣದ ವಿಚಾರಣೆ ಆರಂಭವಾಗಿ ವಿಶೇಷ ನ್ಯಾಯಾಲಯವು ಏ.7ರಂದು ತನ್ನ ವಿಚಾರಣೆಯನ್ನು ಹಾಗೂ ವಾದ-ಪ್ರತಿವಾದ ಆಲಿಕೆ ಪೂರ್ಣಗೊಳಿಸಿ ಏ.25ಕ್ಕೆ ಆದೇಶ ಕಾಯ್ದಿರಿಸಿತ್ತು.

loading...