ಇಂಜಿನೀಯರ್‍ಗಳು ಆಧುನಿಕ ತಂತ್ರಜ್ಞಾನ ಬಳಸಲು ಮುಂದಾಗಬೇಕು: ವಿಶ್ವ ಎಸ್.

0
7
loading...

ಕಾರವಾರ: ಸರಕಾರ ಡಿಜಿಟಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕೆಡಿಎನಲ್ಲಿ ಆಟೋ ಡಿಸಿಆರ್ ಪದ್ಧತಿ ಜಾರಿಗೆ ಬರಲಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸಿವಿಲ್ ಎಂಜಿನೀಯರ್‍ಗಳು ಹೆಚ್ಚಾಗಿ ಆಧುನಿಕ ತಂತ್ರಜ್ಞಾನ ಬಳಸಲು ಮುಂದಾಗಬೇಕು ಎಂದು ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಶ್ವ ಎಸ್. ಹೇಳಿದರು.
ಅವರು ನಗರದ ನ್ಯೂ ಕೆಎಚ್‍ಬಿ ಕಾಲೊನಿಯ ನಿರ್ಮಾಣ ಭವನದಲ್ಲಿ ಸಿವಿಲ್ ಸಲಹಾ ಅಭಿಯಂತರರ ಸಂಘವು ಆಯೋಜಿಸಿದ ಸಂಘದ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಪತ್ರಕರ್ತ ಟಿ.ಬಿ.ಹರಿಕಾಂತ್ ಮಾತನಾಡಿ ಕೆಟ್ಟ ವಾಸನೆಯಿಂದ ಗಬ್ಬೆದ್ದು ನಾರುತ್ತಿರುವ ಕೋಣೆನಾಲಾ ನಗರಕ್ಕೆ ಶಾಪವಾಗಿದೆ. ಇದೊಂದು ಜ್ವಲಂತ ಸಮಸ್ಯೆಯಾಗಿದ್ದು, ನಗರಕ್ಕೆ ಬರುವ ಪ್ರವಾಸಿಗರಿಗೆ ಮೊದಲು ಸ್ವಾಗತಿಸುವುದೇ ಇಲ್ಲಿನ ನಾಲಾದ ಕೆಟ್ಟ ದೃಶ್ಯ ಹಾಗೂ ವಾಸನೆ. ಆದ್ದರಿಂದ ಸಿವಿಲ್ ಸಲಹಾ ಅಭಿಯಂತರರ ಸಂಘ ಇದಕ್ಕೊಂದು ಶಾಶ್ವತ ಪರಿಹಾರ ಸೂಚಿಸಬೇಕಾಗಿದೆ.ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಸಂಘದ ನೂತನ ಪದಾಧಿಕಾರಿಗಳು ಕಾರವಾರದ ಸಾರ್ವಜನಿಕರ ಸಹಕಾರದಲ್ಲಿ ಈ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಬೇಕು ಎಂದು ಕೋರಿದರು.

ನೂತನ ಅಧ್ಯಕ್ಷ ಮೆಹಬೂಬ್ ಸೈಯದ್ ಮಾತನಾಡಿ, ತನಗೆ ನಿಗದಿ ಪಡಿಸಿದ ಅವಧಿಯಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಆ ಮೂಲಕ ಸಂಘದ ಕಾರ್ಯಚಟುವಟಿಕೆಗಳು ಸದಾ ಕ್ರೀಯಾಶೀಲರಾಗಿರುವಂತೆ ನೋಡಿಕೊಳ್ಳಲಾಗುವುದು. ಸಂಘವನ್ನು ಜಿಲ್ಲೆಯಲ್ಲಿಯೇ ಮಾದರಿ ಸಂಘವನ್ನಾಗಿ ರೂಪಿಸಲಾಗುವುದು ಎಂದು ಸದಸ್ಯರಿಗೆ ಭರವಸೆ ನೀಡಿದರು.
ನಂತರ ನಿಕಟಪೂರ್ವ ಅಧ್ಯಕ್ಷ ವಿವೇಕ್ ಬೋಮ್ಕರ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಎಂಜಿನೀಯರ್ ಕೃಷ್ಣಾನಂದ ಬಾಂದೇಕರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ದಿನೇಶ ನಾಯ್ಕ, ಕಾರ್ಯದರ್ಶಿ ಪ್ರದೀಪ್ ಗೋವೇಕರ, ಖಜಾಂಚಿ ಗಣೇಶ ಎಂ.ಆಚಾರಿ, ನಗರಸಭೆ ಸದಸ್ಯ ಪ್ರದೀಪ್ ಗುನಗಿ, ರಾಘವೇಂದ್ರ ಪ್ರಭು,ನಾಗರಾಜ ಜೋಶಿ, ಜಗದೀಶ್ ನಾಯ್ಕ ಸೇರಿದಂತೆ ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.

loading...