ಎಟಿಎಂ ಬಂದ್‌ : ಹೈರಾಣಾದ ಸಾರ್ವಜನಿಕರು

0
33
loading...

 

ಎಟಿಎಂ ಬಂದ್‌ : ಹೈರಾಣಾದ ಸಾರ್ವಜನಿಕರು
ಕನ್ನಡಮ್ಮ ಸುದ್ದಿ-ಖಾನಾಪುರ: ಬ್ಯಾಂಕ್‌ ಗ್ರಾಹಕರಿಗೆ ತುರ್ತು ಸಂದರ್ಭದಲ್ಲಿ ಬೇಕಾದ ಹಣವನ್ನು ನೀಡಲು ಅಳವಡಿಸಿದ ಆಲ್‌ ಟೈಂ ಮನಿ ನೀಡುವ ಅಟೋಮೆಟಿಕ್‌ ಟೆಲ್ಲರ್‌ ಮಶೀನುಗಳು ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಬಂದ್‌ ಆಗಿದ್ದು, ಎಟಿಎಂಗಳ ನಿರ್ವಹಣೆಯಲ್ಲಿ ವಿಫಲಗೊಂಡ ವಿವಿಧ ಬ್ಯಾಂಕುಗಳ ಗ್ರಾಹಕ ವಿರೋಧಿ ನೀತಿಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ಬ್ಯಾಂಕ್‌ ಸಾರ್ವಜನಿಕರು ಅಕ್ಷರಶಃ ಹೈರಾಣಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಪಟ್ಟಣದ ಸಿಂಡಿಕೇಟ್‌ ಬ್ಯಾಂಕ್‌, ಎಸ್‌.ಬಿ.ಐ, ಕೆನರಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಫೆಡರಲ್‌, ಬ್ಯಾಂಕ್‌ ಆಫ್‌ ಇಂಡಿಯಾ, ಆಕ್ಸಿಸ್‌ ಮತ್ತಿತರ ಬ್ಯಾಂಕುಗಳ ಎಟಿಎಂಗಳ ಪೈಕಿ ಅರ್ಧದಷ್ಟು ಎಟಿಎಂಗಳು ಬೀಗ ಜಡಿದ ಸ್ಥಿತಿಯಲ್ಲಿದ್ದು, ಇನ್ನರ್ಧ ಎಟಿಎಂಗಳ ಬಾಗಿಲು ತೆರೆದಿದ್ದರೂ ಅವುಗಳ ಮುಂದೆ ನೋ ಕ್ಯಾಶ್‌ ಬೋರ್ಡ್‌ ಅಳವಡಿಸಿಕೊಂಡಿವೆ.
ಇತ್ತೀಚೆಗಷ್ಟೇ ಹಳೆದ ಆರ್ಥಿಕ ವರ್ಷ ಮುಗಿದು ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದ್ದು, ಮಾರ್ಚ್‌ ಅಂತ್ಯದ ಕಾರಣ ಬಹುತೇಕ ಇಲಾಖೆಗಳ ನೌಕರರ ವೇತನಗಳು ಏಪ್ರಿಲ್‌ 8ರ ನಂತರ ಬ್ಯಾಂಕ್‌ ಖಾತೆಗೆ ಸಂದಾಯಗೊಂಡಿವೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಪಟ್ಟಣದ ಬಹುತೇಕ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಮತ್ತು ಬ್ಯಾಂಕ್‌ನ ಸಿಬ್ಬಂದಿ ಬ್ಯಾಂಕ್‌ ವಿಧಾನಸಭಾ ಚುನಾವಣೆಯ ನೆಪವೊಡ್ಡಿ ಗ್ರಾಹಕರಿಗೆ ತಮ್ಮ ಎಸ್‌.ಬಿ ಖಾತೆಯಿಂದ ದಿನಕ್ಕೆ ಗರಿಷ್ಠ 20 ಸಾವಿರ ನಗದು ಮಾತ್ರ ಹಿಂಪಡೆಯುವಂತೆ ಹೇಳುತ್ತಿದ್ದಾರೆ. ಇನ್ನಾದರೂ ಬ್ಯಾಂಕ್‌ ಅಧಿಕಾರಿಗಳು ಎಚ್ಚೆತ್ತು ಗ್ರಾಹಕರ ಆರ್ಥಿಕ ಸಂಕಷ್ಟಗಳನ್ನರಿತುಕೊಳ್ಳಬೇಕು. ತಮ್ಮ ಬ್ಯಾಂಕುಗಳ ಎಟಿಎಂಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಬೇಕು ಮತ್ತು ಎಟಿಎಂಗಳಲ್ಲಿ ಹಣ ಸುಲಭವಾಗಿ ಸಿಗುವಂತೆ ಗಮನಹರಿಸಬೇಕು ಎಂಬುದು ತಾಲೂಕಿನ ಎಲ್ಲ ಬ್ಯಾಂಕ್‌ ಸಾರ್ವಜನಿಕರು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.

loading...