ಎನ್‍ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಧವ ನಿರ್ಧಾರ

0
7
loading...

ಕನ್ನಡಮ್ಮ ಸುದ್ದಿ-ಕಾರವಾರ: ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಯಾಗಿ ಕಾರವಾರ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಹೇಳಿದರು.

ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜನರು ಹಾಲಿ ಶಾಸಕರನ್ನು, ಮಾಜಿ ಸಚಿವರ ಕಾರ್ಯವೈಖರಿಯನ್ನು, ಅವರು ಮಾಡಿದ ಅಭಿವೃದ್ಧಿಯನ್ನು ಈಗಾಗಲೇ ನೋಡಿದ್ದಾರೆ. ಹೊಸ ಮುಖವನ್ನು ಬಯಸಿದ್ದು, ಜನರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೆನೆ. ರಾಜಕೀಯಕ್ಕೆ ಬರಬಾರದು ಎಂದು ನಿರ್ಧರಿಸಿದ್ದೆ. ನಮ್ಮ ಕುಟುಂಬದಲ್ಲಿ ಗ್ರಾ.ಪಂ.ತನಕ ರಾಜಕೀಯ ಪ್ರವೇಶಿಸಿದ್ದಾರೆ. ನಾನು ಸಹ ಹಿಂದೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ ಅವರು ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. ಹಾಗಾಗಿ ಜನರ ಹಿತಕ್ಕಾಗಿ ಕಾರವಾರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇಳಿಯುತ್ತಿದ್ದೇನೆ ಎಂದರು.
ಹಣ ಹಂಚಿ ಗೆಲ್ಲುವುದರಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ನಾನು ಈ ಸಲದ ಚುನಾವಣೆಯಲ್ಲಿ ಹಣ ಹಂಚುವುದಿಲ್ಲ. ಕೋಮಾರಪಂಥ ಸಮಾಜಕ್ಕೆ ಸೇರಿರುವ ನಾನು ಆ ಸಮಾಜದ ಮತಗಳನ್ನು ಹಾಕುವಂತೆ ಸಮಾಜದಲ್ಲಿ ವಿನಂತಿಸುವೆ. ಕೋಮಾರಪಂಥ ಸಮಾಜಕ್ಕೆ ಕಾಂಗ್ರೆಸ್ , ಬಿಜೆಪಿ ಟಿಕೆಟ್ ನೀಡಿಲ್ಲ. ನಮಗೆ ರಾಜಕೀಯ ಪ್ರಾತಿನಿಧ್ಯ ಬೇಕಿದೆ. ಹಾಗಾಗಿ ನಮ್ಮ ಸಮಾಜ ಸೇರಿದಂತೆ ಎಲ್ಲಾ ಸಮಾಜದವರ ಮತ ಕೇಳುವೆ. ನನಗೆ ಜಾತಿಯಲ್ಲಿ ನಂಬಿಕೆಯಿಲ್ಲ ಎಂದರು.
ಕಾಂಗ್ರೆಸ್ ನನಗೆ ಲೆಕ್ಕಕ್ಕೆ ಇಲ್ಲ. ನಮ್ಮ ಎದುರಾಳಿ ಈಗ ಬಿಜೆಪಿ. ಆ ಪಕ್ಷದ ಅಭ್ಯರ್ಥಿ ಕೋಮಾರಪಂಥ ಸಮಾಜದವರೆಂದು ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಎಲ್ಲವೂ ಮುಂದಿನ ದಿನಗಳಲ್ಲಿ ಬಯಲಾಗಲಿದೆ ಎಂದರು.

ಎನ್‍ಸಿಪಿ ರಾಜ್ಯದ 22 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಪ್ರಪುಲ್ಲ ಪಟೇಲ್ ಬರಲಿದ್ದಾರೆಂದು ಮಾಧವ ನಾಯ್ಕ ಹೇಳಿದರು. ಈ ಸಂದರ್ಭದಲ್ಲಿ ಎಂ.ಆರ್.ನಾಯ್ಕ, ಎ.ಆರ್.ಶೇಖ್, ಫಕೀರಪ್ಪ ಮುಂತಾದವರು ಉಪಸ್ಥಿತರಿದ್ದರು.

loading...