ಕಮೀಷನ್‌ ಸರಕಾರದ ಲೆಕ್ಕ ಕೊಡಿ: ಅಮಿತ್‌ ಶಾ ವಾಗ್ದಾಳಿ

0
18
loading...

ಗಂಗಾವತಿ: ನಿಮಗೆ ಕಮೀಷನ್‌ ಸರಕಾರ ಬೇಕೋ, ಕಮಿಟ್‌ಮೆಂಟ್‌ ಸರಕಾರ ಬೇಕೋ ಎಂದು ಹೇಳುವದರ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದರು.
ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮೇ.12 ರಂದು ಚುನಾವಣೆ ನಡೆದು ಮೇ.15 ರಂದು ನೂತನವಾಗಿ ಬಿಜೆಪಿ ಸರಕಾರ ರಚಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿ ಬಿರುಗಾಳಿ ಎದ್ದಿಲ್ಲ, ಸುನಾಮಿ ಬಂದಿದೆ ಎಂದು ಹೇಳಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡ ಅವರು ಹನುಮ ಜನಿಸಿದ ಈ ನಾಡು ಪಾವನ ಮತ್ತು ಪುಣ್ಯ ಕ್ಷೇತ್ರವಾಗಿದೆ. ಮುನವಳ್ಳಿಯವರ ಸಲುವಾಗಿ ಈ ಪುಣ್ಯ ಭೂಮಿಗೆ ಆಗಮಿಸುವ ಭಾಗ್ಯ ತನಗೆ ದೊರಕಿರುವದಕ್ಕೆ ಪರಣ್ಣನವರಿಗೆ ಧನ್ಯವಾದಗಳು ತಿಳಿಸಿದರು.
ರಾಹುಲ್‌ಬಾಬಾ ಲೆಕ್ಕ ಕೊಡಿ:ರಾಜ್ಯದಲ್ಲಿ ನಡೆಯುತ್ತಿರುವದು ಕಮೀಷನ್‌ ಸರಕಾರ. ಮೋದಿ ಸರಕಾರ ರಾಜ್ಯ ಸರಕಾರಕ್ಕೆ ನೀಡಿರುವ ಹಣದ ಲೆಕ್ಕ ಕೇಳುತ್ತಿರುವ ರಾಹುಲ್‌ಬಾಬಾ ಮೊದಲಿಗೆ ಸಿದ್ದರಾಮಯ್ಯನವರ ಕಮೀಷನ್‌ ಸರಕಾರದ ಲೆಕ್ಕ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
ಕೇಂದ್ರ ಸರಕಾರ 14ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 2.40 ಲಕ್ಷ ಕೋಟಿ ಅನುದಾನ ನೀಡಿದೆ. ಈ ಹಣದಿಂದ ಅಭಿವೃದ್ದಿ ಮಾಡದ ಸಿದ್ದರಾಮಯ್ಯ ಹಣವನ್ನು ಕಾಂಗ್ರೆಸ್‌ ಮುಖಂಡ ಮನೆಗೆ ಸಾಗಿಸಿ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಹೇಳಿದರು.
3500 ರೈತರ ಆತ್ಮಹತ್ಯೆ: ರಾಜ್ಯದಲ್ಲಿ 3500 ಜನ ರೈತರ ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದಾರೆ. ಇದರ ಪಾಪದ ಫಲ ರಾಹುಲ್‌ಬಾಬಾಗೆ ಸೇರುತ್ತದೆ ಎಂದು ಟೀಕಿಸಿದರು. ರೈತರ ಆತ್ಮಹತ್ಯೆ ಜೊತೆಗೆ ಮಹಿಳೆಯರು ಅಭದ್ರತೆಯಲ್ಲಿ ಜೀವನ ನಿರ್ವಹಣೆ ಮಾಡುವ ಪರಿಸ್ಥಿತಿ ಒದಗಿ ಬಂದಿದೆ. ಸರಿಯಾದ ಸಮಯಕ್ಕೆ ವಿದ್ಯುತ್‌ ಇಲ್ಲ, ಕುಡಿಯಲು ನೀರಿಲ್ಲ, ರೈತರ ಬೆಳೆಗಳಿಗೆ ನೀರಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್‌ ಸರಕಾರಕ್ಕೆ ಕಣ್ಣು, ಕಿವಿ, ಮೂಗು ಯಾವುದು ಇಲ್ಲ ಇದನ್ನು ಸರಕಾರ ಎಂದು ಕರೆಯಲು ನಾಚಿಕೆಯಾಗುತ್ತದೆ ಎಂದು ಅಮಿತ್‌ಶಾ ವಾಗ್ದಾಳಿ ನಡೆಸಿದರು.
ಮಗಳು ಬಿಜೆಪಿ ಬಿರುಗಾಳಿ ಎಂದು ವರದಿ ಮಾಡಿವೆ. ಇದು ಬಿರುಗಾಳಿಯಲ್ಲಿ ಬಿಜೆಪಿ ಸುನಾಮಿಯಾಗಿದೆ. ಈಗಾಗಲೇ ದೇಶದ 21 ರಾಜ್ಯಗಳು ಕಾಂಗ್ರೆಸ್‌ ಮುಕ್ತವಾಗಿವೆ. ಈಗಿನ ಸರದಿ ಕರ್ನಾಟಕ. ಇದನ್ನು ಸಹ ಭ್ರಷ್ಟ ಕಾಂಗ್ರೆಸ್‌ ಮುಕ್ತ ಮಾಡಿ ಬಿಜೆಪಿ ಬರಲಿದೆ ಎಂದು ಹೇಳಿದರು.
ರಾಹುಲ್‌ಬಾಬಾ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ, ಹಿಂದೂಗಳ ಹತ್ಯೆ, ನಿರುದ್ಯೋಗ ಸಮಸ್ಯೆಗಳು ನಂ.1 ಸ್ಥಾನದಲ್ಲಿವೆ. ಇವೆ ಏನು ನಿಮ್ಮ ಕೊಡುಗೆ ಎಂದು ಕೇಳಿದರು.
ಸೀಮೆಎಣ್ಣೆ ಮತ್ತು ಕಂದೀಲು ಬೆಳಕಿನಲ್ಲಿ ಜೀವನ ಮಾಡುವ ಮಹಿಳೆಯರಿಗೆ ಉಜ್ವಲ ಯೋಜನೆ ಮುಖಾಂತರ 9 ಲಕ್ಷ ಗ್ಯಾಸ್‌ ಸಿಲೆಂಡರ್‌ಗಳನ್ನು ವಿತರಣೆ ಮಾಡಿದೆ. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ಈ ಪ್ರದೇಶ ಭತ್ತದ ಕಣಜ ಎಂದು ಹೆಸರು ವಾಸಿಯಾಗಿದೆ. ಆದರೆ ಭತ್ತ ಬಳೆಯುತ್ತಿರುವ ರೈತನ ಮುಖದಲ್ಲಿ ಮಂದಹಾಸ ಮಾಯವಾಗಿದೆ. ಮೋದಿ ಸರಕಾರ ಭತ್ತಕ್ಕೆ ಬೆಂಬಲ ಬೆಲೆ ನೀಡಲು ಸಿದ್ದ ಇದೆ. ಭತ್ತದ ಉತ್ಪಾದನೆ ವೆಚ್ಚದ 1.5 ಪಟ್ಟು ಬೆಲೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಸೋಲಿನ ಭಯ ಪಲಾಯನ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭಯದಿಂದ ಬಾದಾಮಿಗೆ ಪಲಾಯನ ಮಾಡಿದ್ದಾರೆ. ಇಲ್ಲಿ ನಮ್ಮ ಪಕ್ಷದ ಹುಲಿ ಶ್ರೀರಾಮುಲು ಗೆಲುವು ಖಚಿತ ಎಂದು ತಿಳಿಸಿದರು.
ಧರ್ಮ ಒಡೆಯುವ ತಂತ್ರ ಕರಡಿ:ಸಂಸದ ಕರಡಿ ಸಂಗಣ್ಣ ಮಾತನಾಡಿ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಧರ್ಮವಾಗಿದೆ. ಇದನ್ನು ವ್ಯವಸ್ಥಿತವಾಗಿ ಒಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಕೇಂದ್ರದಿಂದ ಗಂಗಾವತಿಗೆ ಕೇಂದ್ರಿಯ ವಿದ್ಯಾಲಯ ಮಂಜೂರಾಗಿದೆ. ಅಮೃತ ನಗರ ಯೋಜನೆಗೆ 120 ಕೋ.ರು. ಅನುದಾನ ಬಿಡುಗಡೆಯಾಗಿದೆ. ಮುಂದಿನ ಎರಡು ತಿಂಗಳಿನಲ್ಲಿ ಗಂಗಾವತಿಯಲ್ಲಿ ರೈಲಿನ ಸಂಚಾರ ಆರಂಭಗೊಳ್ಳುತ್ತದೆ ಎಂದು ಹೇಳಿದರು.
ತಿಪ್ಪೇರುದ್ರಸ್ವಾಮಿ, ಮಾಜಿ ಶಾಸಕ ಜಿ.ವೀರಪ್ಪ, ದೇವಪ್ಪ ಕಾಮದೊಡ್ಡಿ, ಸೈಯದ್‌ ಅಲಿ, ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ದಡೇಸೂಗೂರು, ಮಾಜಿ ಸಚಿವ ಸಾಲೋಣಿನಾಗಪ್ಪ, ಎಚ್‌.ಆರ್‌.ಚನ್ನಕೇಶವ, ನಗಸಭೆ ಸದಸ್ಯೆಯರಾದ ಸಂತೋಷಿ ಬಾಂಠಿಯಾ, ದ್ರಾಕ್ಷಾಯಿಣಿ ಕುರುಗೋಡು, ಶ್ರವಣಕುಮಾರ ರಾಯ್ಕರ್‌ ಪಾಲ್ಗೊಂಡಿದ್ದರು.

loading...