ಕಾಂಗ್ರೆಸ್‌ ಉತ್ತಮ ಸಂಘಟನೆಯನ್ನು ಹೊಂದಿದೆ: ನಾಯ್ಕ

0
10
loading...

ಕನ್ನಡಮ್ಮ ಸುದ್ದಿ-ಶಿರಸಿ: ವಿಧಾನಸಭಾ ಚುನಾವಣೆ ಎದುರಿಸಲು ಜಿಲ್ಲಾ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಗಟ್ಟಿಯಾಗಿದ್ದು, ಜಿಲ್ಲೆಯ ಎಲ್ಲಾ 6 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಉತ್ತಮ ಸಂಘಟನೆಯನ್ನು ಹೊಂದಿದೆ. ಸರ್ಕಾರ ಉತ್ತಮ ಹಾಗೂ ಜನಪರ ಆಡಳಿತ ನೀಡಿದೆ. ಇದೆಲ್ಲದರ ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ನಮ್ಮ ಕೈವಶವಾಗಲಿದೆ ಎಂದರು.
ಕಾಂಗ್ರೆಸ್‌ ಬೂತ್‌, ವಾರ್ಡ್‌ ಮಟ್ಟದಲ್ಲಿ ಉತ್ತಮ ಸಂಘಟನೆ ಹೊಂದಿದೆ. ಕಾಂಗ್ರೆಸ್‌ ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಬೂತ್‌ ಕಾರ್ಯಕರ್ತರು ಪಕ್ಷ ಸದೃಢವಾಗಿಸಿ, ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಜನರು ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಮನಸ್ಸು ಮಾಡಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿಯೂ ಕಳೆದ 25 ವರ್ಷಗಳಿಂದ ಕಾಂಗ್ರೆಸ್‌ ಅಧಿಕಾರದಲ್ಲಿರದ ಕೊರತೆ ಈ ಬಾರಿ ನಿಗಲಿದೆ. ಕಾಂಗ್ರೆಸ್‌ ರಾಜ್ಯದೆಲ್ಲೆಡೆಯೂ ಜಯಭೇರಿ ಭಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ಜಿಲ್ಲಾಧ್ಯಕ್ಷ ಸ್ಥಾನವನ್ನು ಉಳಿಸುವುದು ಬಿಡುವುದು ಪಕ್ಷ್‌ ಹೈಕಾಂಡ್‌ಗೆ ಬಿಟ್ಟ ವಿಷಯ. ಹಿರಿಯರ ನಿರ್ದೇಶನದ ಮೇರೆಗೆ ಚುನಾವಣೆಯಲ್ಲಿ ಕೆಲಸ ಮಾಡಲಾಗುವುದು. ನನ್ನ ಮೇಲೆ ವಿಶ್ವಾವಿಟ್ಟು ಟಿಕೇಟ್‌ ನೀಡಿದ ವರಿಷ್ಠರಿಗೆ ಧನ್ಯವಾದ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್‌.ಕೆ.ಭಾಗ್ವತ್‌, ಉಪೇಂದ್ರ ಪೈ, ಸೂರ್ಯಪ್ರಕಾಶ ಹೊನ್ನಾವರ, ಕಲಾವತಿ ವಾಜ್‌, ಮಾಧವ ರೇವಣಕರ ಮುಂತಾದವರು ಇದ್ದರು. ಸತೀಶ ನಾಯ್ಕ ನಿರೂಪಿಸಿದರು.

loading...