ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮೂಲಕ ಹಣ ಸಂಗ್ರಹ: ಅಮಿತ್ ಶಾ

0
29
loading...

ಖಾನಾಪುರ: ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಮೂಲಕ ಹಣ ಸಂಗ್ರಹಿಸಿ ಪಕ್ಷದ ಹೈಕಮಾಂಡ್‍ಗೆ ನೀಡಿದೆ. ತನ್ನ ಭ್ರಷ್ಟ ಆಡಳಿತದಿಂದಾಗಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಆರೋಪಿಸಿದರು.
ತಾಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಭೇಟಿ ನೀಡಿ ಗೌರವ ಅರ್ಪಿಸಿದ ಬಳಿಕ ಗ್ರಾಮದ ಒಕ್ಕಲುತನ ಹುಟ್ಟುವಳಿ ಮಾರಾಟ ಮಂಡಳಿಯ ಆವರಣದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶದಲ್ಲಿ ಇವತ್ತಿನವರೆಗೆ 13 ಕಾಂಗ್ರೆಸ್ ಸರ್ಕಾರಗಳು ಪತನಗೊಂಡಿದ್ದು, ಬಿಜೆಪಿ ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಹೋರಾಟ ನಡೆಸಲಿದೆ ಎಂದರು.

ನಮ್ಮ ದೇಶಕ್ಕೆ ಸ್ವಾತಂತ್ರ ದೊರಕುವ ಪೂರ್ವದಲ್ಲೇ ಬ್ರಿಟೀಷರ ವಿರುದ್ಧ ಸಂಗೊಳ್ಳಿ ರಾಯಣ್ಣ ನಡೆಸಿದ ಹೋರಾಟ, ಬ್ರಿಟೀಷರಿಗೆ ಕಲಿಸಿದ ಪಾಠ, ತನ್ನ ಸಂಸ್ಥಾನ ಸ್ವಾತಂತ್ರ ಗಳಿಸುವುದಕ್ಕಾಗಿ ಆತ ಮಾಡಿದ ತ್ಯಾಗ, ಬಲಿದಾನಗಳು, ಆತ ತೋರಿದ ದೇಶಭಕ್ತಿ ನಮ್ಮೆಲ್ಲರಿಗೂ ಮಾದರಿಯಾಗಿವೆ. ದೇಶಸೇವೆ ಮಾಡುವವರಿಗೆ ಪ್ರೇರಣೆಯಾಗಿರುವ ಇಂತಹ ಮಹಾನ್ ಪುಣ್ಯ ಪುರುಷನ ಸಮಾಧಿಗೆ ಗೌರವ ಅರ್ಪಿಸಲಾಗಿದೆ. ವೀರಾವೇಶದ ಹೋರಾಟದಿಂದ ಈ ಭಾಗದ ಜನಮಾನಸದಲ್ಲಿ ಅಮರರಾಗಿ ಉಳಿದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಬಲಶಾಲಿಗಳ ಕರ್ಮಭೂಮಿಗೆ ಆಗಮಿಸಿ ಅವರಿಗೆ ಗೌರವ ಅರ್ಪಿಸುತ್ತಿರುವುದು ತಮ್ಮ ಪಾಲಿಗೆ ಹೆಮ್ಮೆಯ ವಿಷಯ ಎಂದು ಅವರು ಅಭಿಪ್ರಾಯ ಪಟ್ಟರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜ್ಯದ ಜನರ ನಾಡಿಮಿಡಿತವನ್ನು ಬಲ್ಲವರಾಗಿದ್ದು, ರಾಜ್ಯದ ಎಲ್ಲ ಪ್ರದೇಶದ ಜನರ ಭಾವನೆಗಳ ಜೊತೆ ಅವರು ಬೆರೆತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಂದಗಡದ ರಾಯಣ್ಣ ಸಮಾಧಿ ಅಭಿವೃದ್ಧಿಗೆ 2 ಕೋಟಿ ಅನುದಾನ ನೀಡಿದ್ದಾರೆ. ಎಲ್ಲ ಭಾಷೆ, ಜಾತಿ, ಮತ, ಪಂಥ, ಧರ್ಮಗಳ ಜನರ ಜೊತೆ ಒಡನಾಟ ಇಟ್ಟುಕೊಂಡಿರುವ ಯಡಿಯೂರಪ್ಪ ಅವರಿಂದಾಗಿ ಈ ಹಿಂದೆ ರಾಜ್ಯ ಅಭಿವೃದ್ಧಿಯನ್ನು ಹೊಂದಿದ್ದು, ಮುಂದೆಯೂ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ರಾಜ್ಯದ ಸಂಪನ್ಮೂಲವನ್ನು ಯಶಸ್ವಿಯಾಗಿ ಬಳಸಿ ರಾಜ್ಯದ ಅಭಿವೃದ್ಧಿಯನ್ನು ಮಾಡುವ ಸಂಕಲ್ಪವನ್ನು ಬಿಜೆಪಿ ಹೊಂದಿದ್ದು, ಇದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮೊದಲ ಬಾರಿ ನಂದಗಡ ಗ್ರಾಮಕ್ಕೆ ಭೇಟಿ ನೀಡಿದ ಅಮಿತ ಶಾ ಅವರಿಗೆ ಪಕ್ಷದ ಬ್ಲಾಕ್ ವತಿಯಿಂದ ರಾಯಣ್ಣನ ಕಂಚಿನ ಪುತ್ಥಳಿಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ, ಪಕ್ಷದ ಮುಖಂಡರಾದ ಬಾಬುರಾವ್ ದೇಸಾಯಿ, ಗಜಾನನ ರೇಮಾಣಿ, ಮಂಜುಳಾ ಕಾಪಸೆ, ಸಂಜಯ ಕುಬಲ, ವಲ್ಲಭ ಗುಣಾಜಿ, ವಿಠ್ಠಲ ಹಲಗೇಕರ, ಬಾಬಣ್ಣ ಪಾಟೀಲ, ಧನಶ್ರೀ ದೇಸಾಯಿ, ಶರದ ದೇಶಕಾಮತ, ಸಂಜಯ ಕಂಚಿ, ಅಪ್ಪಯ್ಯ ಕೋಡೊಳಿ, ಮಲ್ಲಪ್ಪ ಮಾರಿಹಾಳ ಮತ್ತಿತರರು ಇದ್ದರು. ಸುಭಾಸ ಗುಳಶೆಟ್ಟಿ ಸ್ವಾಗತಿಸಿದರು. ಪ್ರಮೋದ ಕೊಚೇರಿ ವಂದಿಸಿದರು.

loading...