ಕಾಗೇರಿಗೆ ಟಿಕೇಟ್‌ ಘೋಷಣೆ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ

0
18
loading...

ಕನ್ನಡಮ್ಮ ಸುದ್ದಿ-ಶಿರಸಿ: ವಿಧಾನಸಭಾ ಚುನಾವಣೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಚುನಾವಣಾ ಕದನಕ್ಕೆ ಹಸಿರು ನಿಶಾನೆ ನೀಡಿದೆ. ನಿರೀಕ್ಷೆಯಂತೆ ಹಾಲೀ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೇಟ್‌ ಘೋಷಣೆ ಆಗಿದ್ದು ಪಕ್ಷದ ಕಾರ್ಯಕರ್ತರ ಉತ್ಸಾಹಕ್ಕೆ ಇಂಬು ನೀಡಿದಂತಾಗಿದೆ.
ಮೇ.12ಕ್ಕೆ ವಿಧಾನಸಭಾ ಚುನಾವಣಾ ಮಹಾಸಮರ ನಡೆಯಲಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಲೀಸ್ಟ್‌ನಲ್ಲಿ ಶಿರಸಿ ಸಿದ್ದಾಪುರದ ಹಾಲೀ ಶಾಸಕ ವಿಶ್ವೇಶ್ವರ ಹೆಗಡೆ ಹೆಸರು ಸೇರಿದ್ದು ಈ ಭಾಗದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ. ಅಂಕೋಲಾ ಕ್ಷೇತ್ರದಿಂದ 2 ಹಾಗೂ ಶಿರಸಿ ಕ್ಷೇತ್ರದಿಂದ ನಿರಂತರ 3 ಬಾರಿ ಆಯ್ಕೆಯಾಗಿರುವ ಕಾಗೇರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಗೆಲುವಿನ ನಾಗಾಲೋಟವನ್ನು ಈ ಬಾರಿಯೂ ಮುಂದುವರಿಸಲು ಅವರು ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಬ್ಬರದ ಪ್ರಚಾರ ಕಣದಲ್ಲಿ ಧುಮುಕಿದ್ದಾರೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಒಂದರಲ್ಲಿ ಬಿಜೆಪಿ ಗೆಲುವು ದಾಖಲಿಸಲು ಕಾಗೇರಿ ಕಾರಣರಾದ ಹಿನ್ನೆಲೆಯಲ್ಲಿ ಪಕ್ಷದಲ್ಲಿಯೂ ಅವರಿಗೆ ಉತ್ತಮ ಸ್ಥಾನವಿದೆ. ಹೀಗಾಗಿ ಪಕ್ಷ ಕೂಡ ಹೊಸಬರಿಗೆ ಮಣೆ ಹಾಕದೇ ಕಾಗೇರಿ ಹೆಸರು ಘೋಷಣೆ ಮಾಡಿದೆ. ವಿರೋಧ ಪಕ್ಷದ ಶಾಸಕನಾಗಿ ಆಡಳಿತದ ಅಸಹಕಾರದ ನಡುವೆಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವ ಕಾಗೇರಿಗೆ ಈ ಬಾರಿ ನಿರೀಕ್ಷೆಯಂತೆ ಟಿಕೆಟ್‌ ಲಭಿಸಿದೆ. ಇದು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದು ಗೆಲುವಿಗೂ ಪೂರಕ ವಾತಾವರಣ ಸೃಷ್ಠಿಸುತ್ತಿದೆ. ಅಳೆದು ತೂಗಿ ಟಿಕಟ್‌ ನೀಡಿರುವ ಕಾರಣ ಪಕ್ಷದ ಉಳಿದ ಮೂರ್ನಾಲ್ಕು ಟಿಕೇಟ್‌ ಆಕಾಂಕ್ಷಿಗಳಿಗೆ ಕಾಗೇರಿ ಪರ ಪ್ರಚಾರ ಮಾಡುವಂತೆ ಖಡಕ್‌ ಸೂಚನೆ ಬಂದಿದೆ ಎನ್ನಲಾಗುತ್ತಿದೆ.

loading...