ಕಾರವಾರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿದ ಶಾಸಕ ಸೈಲ್

0
15
loading...

ಕಾರವಾರ: ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಕೈಗಾರಿಕೆ ತರಲಾಗುವುದು. ಎನ್‍ಪಿಸಿಎಲ್ ಕೈಗಾ ಹಾಗೂ ಸೀಬರ್ಡ್ ಯೋಜನೆಗಳಲ್ಲಿ ಸಿ ಗ್ರೇಡ್ ನೌಕರಿಯಲ್ಲಿ ಸ್ಥಳೀಯರಿಗೆ ಆದ್ಯತೆಗೆ ಪ್ರಯತ್ನಿಸಲಾಗುವುದು. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ನಿರ್ಮಾಣ, ಅಂಕೋಲಾದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಪ್ರವಾಸಿತಾಣಗಳ ಅಭಿವೃದ್ಧಿ, ಕುಡಿಯುವ ನೀರಿನ ಘಟಕಗಳ ಆಧುನೀಕರಣ ಸೇರಿದಂತೆ ಪ್ರಣಾಳಿಕೆಯಲ್ಲಿ ನಿಗದಿ ಪಡಿಸಿದ ಸುಮಾರು 50 ಭರವಸೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕಳೆದ ಐದು ವರ್ಷಗಳ ಅವಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ರಸ್ತೆ, ಸೇತುವೆ, ಕುಡಿಯುವ ನೀರು, ಮೆಡಿಕಲ್ ಕಾಲೇಜು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಸುಮಾರು 1700 ಕೋಟಿ ರೂ.ಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗುವ ಅವಶ್ಯಕತೆ ಇದ್ದು, ಜತೆಗೆ ನಿರುದ್ಯೋಗ, ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಈ ನಿಟ್ಟಿನಲ್ಲಿಯೇ ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಗೆ ಪರಿಸ್ನೇಹಿ ಕೈಗಾರಿಕೆ, ಕಾರವಾರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಧ್ಯಮ ಕೈಗಾರಿಕೆಗಳ ಪ್ರಾರಂಭಿಸಲು ಸರಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ತಿಳ್‍ಮಾತಿ ಬೀಚ್ ಅಭಿವೃದ್ಧಿ ಪಡಿಸಿ ವಿಶ್ವಮಾನ್ಯತೆ ಮತ್ತು ಕಾಳಿ ನದಿ ಎರಡು ಬದಿಯಲ್ಲಿ ಕೋಡಿಬಾಗ ಮತ್ತು ತಾರಿವಾಡದಿಂದ ಕದ್ರಾ ಮತ್ತು ಮಲ್ಲಾಪುರವರೆಗೆ ರಸ್ತೆ ನಿರ್ಮಾಣ ಜತೆಗೆ ಕಾಳಿನದಿ ಹಿನ್ನೀರಿನಲ್ಲಿ ವಾಟರ್ ಸ್ಪೋಟ್ರ್ಸ್ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಮಂಜೂರಾಗಿರುವ ಅಂತರಾಷ್ಟ್ರೀಯ ಕ್ರೀಡಾಂಗಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲಾಗುವುದು. ಶಿರವಾಡ, ಜಾಂಬಾ-ಬೆಳೂರು ರಸ್ತೆ ಹಾಗೂ ಕ್ಯಾನ್ಸರ್ ಆಸ್ಪತ್ರೆಯನ್ನು ಶೀಘ್ರ ಆರಂಭಿಸಲಾಗುವುದು. ಕೊಳಗೇರಿಯಲ್ಲಿ ವಾಸಿಸುವವರಿಗೆ ಸ್ಲಂ ಡೆವಲಪ್ ಕಾರ್ಪೋರೇಷನ್‍ನಿಂದ ಅನುದಾನ ಬಿಡುಗಡೆಗೊಳಿ ಸುಸಜ್ಜಿತ ವಸತಿ ನಿರ್ಮಾಣ ಮಾಡಲಾಗುವುದು. ಮೀನುಗಾರರಿಗೆ ಸಾಲ ಸೌಲಭ್ಯದ ಜತೆಗೆ ಅವಶ್ಯವಿದ್ದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೆಡಿಎ ಚೆರ್‍ಮನ್ ಸಂದೀಪ್ ತಳೇಕರ, ಕೆಡಿಎ ಮಾಜಿ ಚೆರ್‍ಮನ್ ಶಂಭು ಶೆಟ್ಟಿ, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ರವೀಂದ್ರ ಅಮದಳ್ಳಿ ಇತರರು ಇದ್ದರು.

loading...