ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯ

0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ಕೂಜಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಳಗಿನ ಕೂಜಳ್ಳಿಯ ಅಂಗನವಾಡಿಗೆ ಕಲ್ಪಿಸಲಾದ ಕಿರು ನೀರು ಸರಬರಾಜು ಯೋಜನೆಯಲ್ಲಿ ಸುಮಾರು 4 ಲಕ್ಷ ರೂ ಖರ್ಚು ಮಾಡಲಾಗಿದ್ದರೂ, ಅಸಮರ್ಪಕ ನಿರ್ವಹಣೆಯಿಂದ ಈ ಯೋಜನೆ ಹಳ್ಳ ಹಿಡಿದಿರುವುದರಿಂದ ಅಂಗನವಾಡಿ ಸೇರಿದಂತೆ ಸ್ಥಳೀಯರಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಸರ್ಕಾರದ ಲಕ್ಷಾಂತರ ರೂ ನೀರಿನಲ್ಲಿ ಹೋಮಮಾಡಿದಂತಾಗಿದೆ.

ಕೆಳಗಿನ ಕೂಜಳ್ಳಿಯ ಅಂಗನವಾಡಿಯಲ್ಲಿ 10 ಪುಟಾಣಿಗಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಬಡವರು ಮತ್ತು ಹಿಂದುಳಿದ ವರ್ಗದವರ ಮಕ್ಕಳೆ ಹೆಚ್ಚಾಗಿ ಈ ಅಂಗನವಾಡಿಗೆ ಬರುತ್ತಿದ್ದಾರೆ.
ಈ ಯೋಜನೆಯ ವಿಫಲತೆಯ ಕುರಿತು ಕೂಜಳ್ಳಿ ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ, ಈ ಯೋಜನೆ ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಹಾಗಾಗಿ ಪಂಚಾಯಿತಿಯ ಯಾವುದೇ ಅನುದಾನ ಈ ಯೋಜನೆಯ ದುರಸ್ತಿಗೆ ಬಳಸಲು ಸಾಧ್ಯವಿಲ್ಲ ಎಂಬುದು ಪಂಚಾಯಿತಿ ಅಧಿಕಾರಿಗಳ ವಾದವಾದರೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಯೋಜನೆ ಈಗಾಗಲೇ ಪಂಚಾಯಿತಿಗೆ ಹಸ್ತಾಂತರವಾಗಿದೆ. ಈ ಯೋಜನೆಯ ನಿರ್ವಹಣೆ ಮಾಡುವ ಜವಬ್ದಾರಿ ಪಂಚಾಯಿತಿಗೆ ಸಂಬಂಧಿಸಿದ್ದು ಎಂಬುದು ಇವರ ಪ್ರತಿವಾದ. ಒಟ್ಟಾರೆ ಎರಡು ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಯೋಜನೆ ವಿಫಲಗೊಂಡು, ಸರ್ಕಾರಿ ಹಣ ವ್ಯರ್ಥವಾದಂತಾಗಿದೆ. ಕುಡಿಯುವ ನೀರಿನ ಹೆಸರಿನಲ್ಲಿ ಅಸಮರ್ಪಕ ಯೋಜನೆ ರೂಪಿಸಿ, ಹಣ ಹೊಡೆಯುವುದು ಕೆಲ ಅಧಿಕಾರಿಗಳ ದಂಧೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

loading...