ಕುತೂಹಲ ಹುಟ್ಟಿಸಿದ ಕಾರವಾರ ಕ್ಷೇತ್ರ: ಅಸ್ನೋಟಿಕರ್ ವರ್ಸಸ್ ಅನಂತಕುಮಾರ

0
41
loading...

ಕನ್ನಡಮ್ಮ ಸುದ್ದಿ-ಕಾರವಾರ: ತನ್ನ ಸಂಸತ್ ಚುನಾವಣೆಯ ಸಂದರ್ಭ ಹೊರತು ಪಡಿಸಿ ಗ್ರಾಪಂ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆಯವರೆಗೆ ಎಂದಿಗೂ ಯಾರ ಪರವಾಗಿ ಫೀಲ್ಡ್‍ಗಿಳಿದು ನೇರವಾಗಿ ಮತಯಾಚಿಸದ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಮ್ಮ ಎರಡು ದಶಕಗಳ ರಾಜಕೀಯ ಜೀವನದ ಇತಿಹಾಸದಲ್ಲೇ ಈಗ ಮೊದಲ ಬಾರಿಗೆ ಕಾರವಾರದ ಓಣಿ ಓಣಿಗಳಲ್ಲಿ ಕಾರ್ನರ್ ಸಭೆ ನಡೆಸುತ್ತಿರುವುದು ರಾಜಕೀಯ ವಿಶ್ಲೇಷಕರ ಅಚ್ಚರಿಗೆ ಕಾರಣವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪರ ಕನಿಷ್ಠ ಪ್ರಚಾರಕ್ಕೂ ಸಹ ಆಗಮಿಸದೇ ಕ್ಷೇತ್ರದಿಂದಲೇ ದೂರ ದಿಲ್ಲಿಯಲ್ಲಿಯೇ ಅನಂತಕುಮಾರ ಹೆಗಡೆ ಠಿಕಾಣಿ ಹೂಡಿದ್ದರು. ಆದರೆ ಈ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದ ಫಲಿತಾಂಶ ಅನಂತ ಕುಮಾರ ಹೆಗಡೆಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2008 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‍ನಿಂದ ಗೆದ್ದು ಬಂದು ನಂತರ ನಲವತ್ತು ದಿನಗಳಲ್ಲೇ ಆಪರೇಶನ್ ಕಮಲಕ್ಕೆ ಒಳಗಾಗಿ ಕಾಂಗ್ರೇಸ್‍ನಿಂದ ಬಿಜೆಪಿಗೆ ಜಿಗಿದು ಚುನಾವಣೆಯಲ್ಲಿ ಗೆದ್ದು ಆನಂದ ಅಸ್ನೋಟಿಕರ್ ಸಚಿವರಾಗಿಯೂ ಆಯ್ಕೆಯಾದದ್ದು ಆನಂತರದ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಫರ್ಧಿಸಿ ಹೀನಾಯವಾಗಿ ಸೋತಿದ್ದು ಈಗ ಇತಿಹಾಸ. ಈ ಸಮಯದಲ್ಲಿ ಸ್ಥಳೀಯ ಬಿಜೆಪಿಯೊಂದಿಗೂ ಸಹ ಸಂಬಂಧ ಕಡಿದುಕೊಂಡಿದ್ದರು. ಇದನ್ನೇ ಸರಿಯಾಗಿ ಅಸ್ನೋಟಿಕರ್ ವಿರುದ್ಧ ಬಳಸಿಕೊಂಡ ಅನಂತಕುಮಾರ ಹೆಗಡೆ ಅವರ ಬಿಜೆಪಿ ಪ್ರವೇಶಕ್ಕೂ ಅಡ್ಡಗಾಲು ಹಾಕಿ ಅಸ್ನೋಟಿಕರ್ ಪಕ್ಷದಿಂದಲೇ ಹೊರಬೀಳುವಂತೆ ಮಾಡಲು ಯಶಸ್ವಿಯೂ ಆದರು.ಅನಂತಕುಮಾರ ಹೆಗಡೆ ಕಾರವಾರ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕಾರ್ನರ್ ಸಭೆಯಲ್ಲಿ ಪಾಲ್ಗೊಂಡು ರೂಪಾಲಿ ನಾಯ್ಕ ಮತಪತ್ರದಲ್ಲಿ ನಿಮ್ಮ ಅಭ್ಯರ್ಥಿ ಆದರೆ ನಾನೇ ನಿಮ್ಮ ನಿಜವಾದ ಅಭ್ಯರ್ಥಿ ಎಂಬಂತೆ ವ್ಯಾಪಕವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿ ಬಿಜೆಪಿ ಗೆಲುವಿಗೆ ಬೇವರಿಳಿಸುತ್ತಿದ್ದಾರೆ. ಸದ್ಯ ಕಾರವಾರ ಕ್ಷೇತ್ರ ಆನಂದ ವರ್ಸಸ್ ಅನಂತಕುಮಾರ ಆಗಿದ್ದು ಇವರಲ್ಲಿ ಯಾರು ಮೇಲು ಎಂಬುದು ಚುನಾವಣಾ ಫಲಿತಾಂಶದ ದಿನ ತಿಳಿಯಲಿದೆ. ಈ ಮಧ್ಯೆ ಅನಂತ ಹಾಗೂ ಆನಂದರ ಕಾಳಗದ ಮಧ್ಯೆ ಕಾಂಗ್ರೇಸ್‍ನ ಸತೀಶ ಸೈಲ್ ಗೆಲುವಿನ ನಗೆ ಬೀರಿದಲ್ಲಿ ಆನಂದ ಮತ್ತು ಅನಂತ ಇವರಿಬ್ಬರ ಪ್ರತಿಷ್ಠೆ ಮಣ್ಣುಪಾಲಾಗುವುದು ನಿಶ್ಚಿತ ಎಂದು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ಮಾತು.

loading...