ಕೂಲಿ ಕಾರ್ಮಿಕರಿಗೆ ಧನ ಸಹಾಯಕ್ಕೆ ಆಗ್ರಹಿಸಿ ಪ್ರತಿಭಟನೆ

0
36
loading...

ಕನ್ನಡಮ್ಮ ಸುದ್ದಿ-ಬೆಳಗಾವಿ : ಕಾರ್ಮಿಕ ಇಲಾಖೆಯ ವತಿಯಿಂದ ಕೂಲಿ ಕಾರ್ಮಿಕರಿಗೆ ಧನ ಸಹಾಯ ಮಂಜೂರು ಮಾಡಬೇಕು ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಟ್ಟಡ ಇನ್ನಿತರ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಶುಕ್ರವಾರ ಕಾರ್ಮಿಕರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿನ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ಕೆಲಸ ಮಾಡುತ್ತಿರುವ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡರು ಸಹ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳಿಗಾಗಿ ಕಳೆದ 5 ತಿಂಗಳಗಳ ಹಿಂದೆ ಅರ್ಜಿ ಸಲ್ಲಿಸಲಾಗಿದೆ. ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಧನ ಸಹಾಯ ಮಂಜೂರಾತಿಗಾಗಿ ವಿನಂತಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕಟ್ಟಡ ಕಾರ್ಮಿಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿ ತಿಂಗಳು ಗತಿಸಿದರು ಗುರುತಿನ ಚೀಟಿ ನೀಡಿಲ್ಲ. ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರು ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದರೆ ನೀವು ಕಿಯೋನಿಕ್ಸ್ ಸಂಸ್ಥೆ ಮುಖಾಂತರ ಹೆಸರು ನೋಂದಾಯಿಸಿಕೊಳ್ಳುವಂತೆ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಗುರುತಿನ ಚೀಟಿಗಳ ನವೀಕರಣ ಮಾಡುತ್ತಿಲ್ಲ. ಕಾರ್ಮಿಕ ಕಚೇರಿಯಲ್ಲಿ ಗುರುತಿನ ಚೀಟಿಗಳ ನವೀಕರಣಕ್ಕೆ ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರಿಗಾಗಿ ಸರಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸಿದೆ. ಕೂಲಿ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಸರಿಯಾಗಿ ನೀಡದೆ ಇರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು, ಕಾರ್ಮಿಕರಿಗೆ ಧನ ಸಹಾಯ ಮಂಜೂರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಎನ್.ಆರ್.ಲಾತೂರ, ದೀಪಕ ಕೇದಾರಿ, ಅಶೋಕ ಚೌಗಲೆ, ನಾರಾಯಣ ಬೋಕಡೆ, ಮಾರುತಿ ಪಾಟೀಲ, ಪುಂಡಲೀಕ ಕಣಬರಕರ, ಲಕ್ಷ್ಮೀ ಹಳ್ಳಿಕರ, ರಾಮವ್ವಾ ಉಚಗಾಂವಕರ, ಶೋಭಾ ನರೋಟಿ, ನೀಲವ್ವಾ ಉಚಗಾಂವಕರ, ಮಾರುತಿ ಪಿಂಗಟ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...