ಕೃಷಿಹೊಂಡ ಸಹಾಯದಿಂದ ಉತ್ಕೃಷ್ಟ ಫಸಲು ಬೆಳೆದ ರೈತ

0
21
loading...

ನರಗುಂದ: ಕೃಷಿ ಭಾರತದ ಆರ್ಥಿಕತೆಯ ಅವಿಭಾಜ್ಯ ಅಂಗ ಇದನ್ನು ಅವಲಂಬಿಸಿ ಜೀವನ ಪಡೆಯುವರ ಸಂಖ್ಯೆಯು ಯಥೇಚ್ಛವಾಗಿದೆ. ಕೃಷಿಯಲ್ಲಿ ನವ-ನವೀನ ತಂತ್ರಜ್ಞಾನಗಳ ಬಳಕೆ, ಇವತ್ತಿನ ಅತಿ ಮುಖ್ಯ ಅವಶ್ಯಕತೆಗಳಲ್ಲೊಂದು ”ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ” ಎನ್ನುವಂತೆ ಒಕ್ಕುಲುತನ ಇಂದಿನ ಜಾಗತಿಕ ಪ್ರಪಂಚದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಂಪ್ರದಾಯಕ ಕೃಷಿಯ ಜೊತೆ ಜೊತೆಗೆ ಕೃಷಿಯಲ್ಲಿ ಆದುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ತಾಂತ್ರೀಕತೆಗಳು ನಮ್ಮ ಸುತ್ತಲಿನ ಪರಿಸರ ವ್ಯವಸ್ಥೆಗೆ ಘಾಸಿಯಾಗದಂತೆ, ನೈಸರ್ಗಿಕ, ಪ್ರಕ್ರಿಯೆಗಳಿಗೆ ದಕ್ಕೆಯಾಗದಂತ್ತಿದ್ದರೆ ಅವುಗಳನ್ನು ನಮ್ಮ ಕೃಷಿ ಚಟುವಟಿಕೆಳಲ್ಲಿ ಅಳವಡಿಸಿಕೊಳ್ಳಲೇ ಬೇಕಾಗುತ್ತದೆ.
ಈ ದಿಸೆಯಲ್ಲಿ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಕೃಷಿಕರಾದ ಗುರಪ್ಪ ಚವಡಿ ಇವರು ಮಾಡಿದ ಸಾಧನೆಯ ಕಥನ ಮಾದರಿಯಾಗಿದೆ. ಕೃಷಿಕ ಗುರಪ್ಪ ಚವಡಿ, ಹದಲಿ ಗ್ರಾಮದ ವ್ಯಾಪ್ತಿಯಲ್ಲಿ 7-28 ಜಮೀನನ್ನು ಹೊಂದಿದ್ದಾರೆ. 2016-17 ನೇ ಸಾಲಿನಲ್ಲಿÀ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ (29*29*3)ಮೀ ಅಳತೆಯ ಕೃಷಿ ಹೊಂಡ ಹೊಂದಿರುತ್ತಾರೆ. ಇದರ ಜೊತೆಗೆ ತುಂತುರು ನೀರಾವರಿ ಘಟಕ, ಡಿಸೇಲ್‌ ಪಂಪಸೆಟನ್ನು ಸಹ ಇಲಾಖೆಯ ಸಹಾಯಧನದಿಂದ ಪಡೆದುಕೊಂಡಿರುತ್ತಾರೆ. ಈ ಕೃಷಿ ಹೊಂಡದ ಸಹಾಯದಿಂದ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಬೆಳೆಗಳ, ಜೊತೆಗೆ ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಸವತೆ, ಬೆಂಡಿ, ಈರುಳ್ಳಿ, ಬೆಳೆಗಳನ್ನು ಸಹ ಬೆಳದಿದ್ದಾರೆ. ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಸದುಪಯೋಗ ಪಡಿಸಿಕೊಳ್ಳುವುದಲ್ಲದೆ, ಮಣ್ಣು ಸವಕಳಿಯನ್ನು ಸಹ ತಡೆಯಬಹುದಾಗಿದೆ ಎಂಬುದನ್ನು ಮನಗಂಡ ಕೃಷಿಕ ಚವಡಿಯವರು,
ತೋಟಗಾರಿಕಾ ಇಲಾಖೆ ಮಾರ್ಗದರ್ಶನದಲ್ಲಿ ತಮ್ಮ ಜಮೀನಿನಲ್ಲಿ ಏರು ಮಡಿ ಸಾಲುಗಳನ್ನು ಮಾಡಿ, ಹನಿ ನೀರಾವರಿ ಘಟಕವನ್ನು ಅಳವಡಿಸಿಕೊಂಡು ಪಾಲೀಥೀನ್‌ ಶೀಟನ್ನು ಮೇಲ್ಬಾಗಕ್ಕೆ ಹಾಕಿ ತೇವಾಂಶ ಉಳಿದುಕೊಂಡು 1 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಇದರ ಜೊತೆಗೆ ಉಳಿದ ಜಮೀನಿನಲ್ಲಿ ತರಕಾರಿ, ಬೆಳೆಗಳನ್ನು ಹಾಗೂ ಕೃಷಿ ಬೆಳೆಗಳಾದ ಹತಿ, ಜೋಳ ಬೆಳೆದಿದ್ದಾರೆ.
“ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ನಾವು ಮಾಡಿಸಿಕೊಂಡ ಕೃಷಿ ಹೊಂಡ ಬಹಳ ಅನುಕೂಲ ಆಗೇತ್ರಿ ಇವತ್ತಿನ ದಿನಮಾನದಾಗ ಅಕಾಲಿಕ ಮಳೆ ಆಗಾಕತ್ತಾವು. ಹಿಂಗ ಅಕಾಲಿಕ ಮಳೆಯಿಂದ ನಮ್ಮ ಭೂಮಿಗೆ ಬಿದ್ದ ನೀರನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳುವುದು ಇವತ್ತ ಅನಿವಾರ್ಯ. ಇದರಿಂದ ನಮ್ಮ ಜಮೀನಿನ ಮಣ್ಣು ಸವಕಳಿಯನ್ನು ನಾವು ತಡೆಗಟ್ಟಿ ನಮ್ಮ ಹೊಲದಾನ ನೀರ ನಮ್ಮ ಕೆರಿಗಳಿಂದ ಸಂಗ್ರಹಿಸಿ ನಮ್ಮ ಬೆಳೆಗಳಿಗೆ ಬೇಕಾದ ಸಂದರ್ಭದೊಳಗೆ ಬಳಸಿಕೊಳ್ಳು ಅನುಕೂಲ ಆಕ್ಕೇತಿ, ಇದಷ್ಟ ಅಲ್ಲಾ ನಮ್ಮ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದೊಳಗ ನಾನು ಮೊದಲ್ನೆಸಲ ಏರಮಡಿ ಮಾಡಿ ಫಾಲೀಥೀನ ಹಾಳಿ ಅದರ ಮ್ಯಾಲೆ ಹಾಕಿ ಹನಿ ನೀರಾವರಿ ಘಟಕ ಅಳವಡಿಸಿಕೊಂಡು ಇಲ್ಲಿಯವರಿಗೂ ಸುಮಾರ 10-12 ಟನ್‌ ಕಲ್ಲಂಗಡಿ ಬೆಳದೇನಿ. ಇದಲ್ಲದೆ 1 ಎಕರೆ ತರಕಾರಿನೂ ಬೆಳದೇನಿ ಈ ಎಲ್ಲಾ ಕಾರ್ಯದೊಳಗ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಬಹಳ ಮುಖ್ಯ ಅಂತ ಹೇಳಾಕ ನನಗು ಖುಷಿ ಆಕತಿ” ಎನ್ನುತ್ತಾರೆ.

loading...