ಗರ್ಭಿಣಿ, ವೃದ್ಧರು, ವಿಕಲಚೇತನ ಮತದಾರರಿಗೆ ನೇರ ಮತದಾನದ ವ್ಯವಸ್ಥೆ

0
21
loading...

ಕನ್ನಡಮ್ಮ ಸುದ್ದಿ-ಕಾರವಾರ: ಮತದಾರರ ಅನುಕೂಲಕ್ಕಾಗಿ ಮತಗಟ್ಟೆ ವಿವರ ಸೇರಿದಂತೆ ಇನ್ನಿತರ ಮಾಹಿತಿಯುಳ್ಳ ಓಟರ್ಸ್‌ಗೈಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ 2018ರ ಸಿದ್ಧತೆ ಕುರಿತು ಕಾರವಾರ ಆಕಾಶವಾಣಿ ನಡೆಸಿದ ಸಂದರ್ಶನ ವೇಳೆಯಲ್ಲಿ ಈ ವಿಷಯ ತಿಳಿಸಿದ ಅವರು, ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಓಟರ್ಸ್‌ ಗೈಡ್‌ ಮುದ್ರಿಸಿ ಕೊಡುವ ಯೋಜನೆ ಹಾಕಿಕೊಂಡಿರುವುದಾಗಿ ಅವರು ತಿಳಿಸಿದರು.
ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಛಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅಧ್ಯಕ್ಷತೆಯ ವ್ಯವಸ್ಥಿತ ಮತದಾರರ ಪಾಲ್ಗೊಳ್ಳುವಿಕೆ ಹಾಗೂ ಮತದಾನದ ಜಾಗೃತಿ ಸಮಿತಿ ‘ಸ್ವೀಪ್‌’ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಾಗೃತಿ ಜಾಥಾ, ಬೈಕ್‌ರ್ಯಾಲಿಗಳು, 2000 ಜನವರಿ 1ರಂದು ಜನಿಸಿ ಮತದಾರರಾಗಿರುವವರಿಗೆ ಸ್ಕೂಬಾ ಡೈವಿಂಗ್‌ ಮಾಡಿಸುವ ಮೂಲಕ ಮತದಾರರ ಚೀಟಿ ವಿತರಣೆ, ವಿಕಲಚೇತನ ಮತದಾರರಿಗೂ ಪ್ಯಾರಾ ಮೋಟಾರ್‌ ಗ್ಲೈಡಿಂಗ್‌ ಮಾಡಿಸುವ ಮೂಲಕ ವಿಕಲಚೇತನ ಮತದಾರರ ಜಾಗೃತಿ ಮತ್ತು ಮತದಾನದ ಖಾತರಿ ವಿವಿಪ್ಯಾಟ್‌ನ ಪ್ರಾತ್ಯಕ್ಷಿಕೆ ಹೀಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಚುನಾವಣೆ ವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಗೆ 28 ಲಕ್ಷ ರೂ. ನಿಗದಿಗೊಳಿಸಲಾಗಿದೆ. ಇದರಲ್ಲಿ ಅಧಿಕೃತ ಮತ್ತು ಅನಧಿಕೃತ ವೆಚ್ಚಗಳು ಇರುತ್ತವೆ. ಅಧಿಕೃತ ವೆಚ್ಚಗಳನ್ನು ಅಭ್ಯರ್ಥಿ ಅಥವಾ ಪಕ್ಷದ ಲೆಕ್ಕದಲ್ಲಿ ದಾಖಲಾಗುತ್ತವೆ. ಆದರೆ ಅನಧಿಕೃತ ವೆಚ್ಚಗಳು ಆಗಲು ಅವಕಾಶವಿಲ್ಲ. ಇವುಗಳ ಮೇಲೆ ನಿಗಾ ವಹಿಸಲು ಅಧಿಕಾರಿಗಳ ತಂಡಗಳು ಹಗಲು ರಾತ್ರಿ ಕರ್ತವ್ಯದಲ್ಲಿವೆ ಎಂದು ಅವರು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.73ರಷ್ಟು ಮತದಾನ ಆಗಿದೆ. ಪ್ರಸ್ತುತ ವರ್ಷ ಶೇ.100ರಷ್ಟು ಮತದಾನ ಆಗಬೇಕೆಂಬ ಗುರಿ ಹೊಂದಿದ್ದು ಅದಕ್ಕೆ ಪೂರಕ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಅವರು ತಿಳಿಸಿದರು.

loading...