ಗುತ್ತಿಗೇರಿ ಕೆರೆ ಕಾಮಗಾರಿ ಚರ್ಚೆಗೆ ಗ್ರಾಸ

0
3
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪ್ರವಾಸೋದ್ಯಮ ಇಲಾಖೆಯ 195 ಲಕ್ಷ ರೂ. ಅನುದಾನದಡಿ ಪಿಡಬ್ಲ್ಯುಡಿ ಇಲಾಖೆಯು ಅಭಿವೃದ್ಧಿ ಪಡಿಸಿದ ಹಳಿಯಾಳ ಪಟ್ಟಣದ ಅಂಚಿನಲ್ಲಿ ಬೆಳಗಾವಿಯಡೆಗೆ ತೆರಳುವ ಹೆದ್ದಾರಿ ಪಕ್ಕದಲ್ಲಿರುವ ಕೆರೆ ಕಾಮಗಾರಿ ಉದ್ಘಾಟನೆಗೊಂಡು 1 ತಿಂಗಳು ಕಳೆದರೂ ಕಾಮಗಾರಿ ಇನ್ನೂ ಬಾಕಿ ಇರುವ ವಿದ್ಯಮಾನ ಚರ್ಚೆಗೆ ಗ್ರಾಸವಾಗಿದೆ.
ಈ ಗುತ್ತಿಗೇರಿ ಕೆರೆಯು 15 ಎಕರೆ ವಿಶಾಲವಾಗಿದ್ದು 162 ಎಕರೆ ನೀರಾವರಿ ಕ್ಷೇತ್ರ ಹೊಂದಿದೆ. ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಕೈಗಾರಿಕೆಗಳ ‘ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ’ ಬಳಸಿ 20-04-2016 ರಿಂದ 8-06-2016ರವರೆಗೆ ಕೆರೆಯಲ್ಲಿನ ಅಂದಾಜು 70 ಸಾವಿರ ಕ್ಯೂಬಿಕ್ ಹೂಳನ್ನು ತೆರವುಗೊಳಿಸಲಾಗಿತ್ತು. ಕೆರೆಯನ್ನು ಅಭಿವೃದ್ಧಿ ಪಡಿಸಿ ಸುಂದರಗೊಳಿಸಬೇಕು ಎಂಬ ಸದುದ್ದೇಶದಿಂದ ಪ್ರವಾಸೋದ್ಯಮ ಇಲಾಖೆ 195 ಲಕ್ಷ ರೂ ಅನುದಾನ ವiಂಜೂರಾದ ಕಾಮಗಾರಿಯು 30-03-2016 ರಂದು ಆರಂಭಗೊಂಡಿತ್ತು. ಹಾಗೂ 1-3-2018ರಂದು ತರಾತುರಿಯಲ್ಲಿ ಉದ್ಘಾಟಣೆ ನೆರವೇರಿತು.

ಚುನಾವಣೆ ಮಾದರಿ ನೀತಿ ಸಂಹಿತೆ ಆರಂಭಗೊಳ್ಳಲಿರುವುದರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೆ ತರಾತುರಿಯಲ್ಲಿ ಉದ್ಘಾಟಣೆ ಮಾಡಿರುವ ಬಗ್ಗೆ ಸಾಮಾಜಿಕ ಜಾತಾಣದಲ್ಲಿ ಟೀಕಾತ್ಮಕವಾಗಿ ಪ್ರಚಾರವಾಗುತ್ತಿದ್ದು ಇದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಿಡ್ಲ್ಯುಡಿಯ ವತಿಯಿಂದ ಗುತ್ತಿಗೆ ಪಡೆದವರು ಉದ್ಘಾಟಣೆ ನೆರವೇರಿಸುವ ಮುಂಚೆ ಮಾಡಿದ್ದ ಗಡಿಬಿಡಿ ಉದ್ಘಾಟನೆಯ ನಂತರ ಏಕೆ ತೋರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
-: ಖಾಲಿಯಾಗುತ್ತಿರುವ ನೀರು – ಬಯಲಾಗುತ್ತಿರುವ ಕೆರೆ :-
ಪ್ರವಾಸೋದ್ಯಮ ಇಲಾಖೆಯ 195 ಲಕ್ಷ ರೂ ಅನುದಾನದಡಿ ಪಿಡಬ್ಲ್ಯುಡಿ ಇಲಾಖೆಯವರು ಕಾಮಗಾರಿ ಆರಂಭಗೊಳಿಸುವ ಮುಂಚೆಯೇ ಅಂದಾಜು 70 ಸಾವಿರ ಕ್ಯೂಬಿಕ್ ಹೂಳನ್ನು ತೆರವುಗೊಳಿಸುವ ಕಾರ್ಯವನ್ನು ಉದ್ಯಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ವಿ ಆರ್ ಡಿ ಎಮ್ ಟ್ರಸ್ಟ್ ನೇತೃತ್ವದಲ್ಲಿ ಮಾಡಲಾಗಿದೆ. ಆದರೆ ಆ ಕಾರ್ಯ ಮಾಡದೆ ಬಿಟ್ಟಿರುವ ಪರಿಣಾಮ ಈಗ ಕಣ್ಣಿಗೆ ರಾಚುತ್ತಿದೆ. ಹೀಗಾಗಿ ಕೆರೆ ಕಾಮಗಾರಿ ಪೂರ್ಣಗೊಳಿಸುವ ಉಳಿದ ಕಾರ್ಯದ ಜೊತೆಗೆ ಕೆರೆಯಲ್ಲಿ ಇನ್ನೂ ಅಪಾರ ಪ್ರಮಾಣದಲ್ಲಿರುವ ಹೂಳನ್ನು ತೆರವುಗೊಳಿಸುವ ಅವಶ್ಯಕತೆ ಇರುವುದನ್ನು ಕಾಣಬಹುದಾಗಿದೆ.

loading...