ಗೃಹರಕ್ಷಕದಳ ಮೂಲ ವಾರ್ಷಿಕ ತರಬೇತಿ ಶಿಬಿರ ಉದ್ಘಾಟನೆ

0
10
loading...

ಕಾರವಾರ: ತರಬೇತಿಯು ಗೃಹರಕ್ಷಕರಿಗೆ ಕರ್ತವ್ಯಪಾಲನೆ ಸಮಯದಲ್ಲಿ ಸಹಕಾರಿಯಾಗಲಿದೆ ಎಂದು ಪೋಲಿಸ್‌ ತರಬೇತಿ ವಿಭಾಗದ ಆರ್‌ಪಿಐ ಸಚಿನ್‌ ಲಾರೆನ್ಸ್‌ ಹೇಳಿದರು.
ಅವರು ಇಲ್ಲಿನ ಕಾಜುಬಾಗದ ಜಿಲ್ಲಾ ಪೋಲಿಸ್‌ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಗೃಹರಕ್ಷಕರಿಗೆ ಹತ್ತು ದಿನಗಳ ಕಾಲ ನಡೆಯುವ ಮೂಲ ವಾರ್ಷಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ತರಬೇತಿಯ ಅವಧಿಯಲ್ಲಿ ಗೃಹರಕ್ಷಕರಿಗೆ ಶಾರೀರಿಕ ಕವಾಯತು, ವ್ಯಾಯಾಮ, ರೈಫಲ್‌ ಬಗ್ಗೆ ಮಾಹಿತಿ, ಪ್ರವಾಹ, ಬೆಂಕಿ ಅನಾಹುತ ಸಂದರ್ಭದಲ್ಲಿ ಗೃಹರಕ್ಷಕರು ಕೈಗೊಳ್ಳಬೇಕಾದ ತುರ್ತು ಕ್ರಮಗಳು, ಸಂಚಾರ ನಿಯಂತ್ರಣ ಇತ್ಯಾದಿಗಳ ಬಗ್ಗೆ ನುರಿತ ಭೋದಕರಿಂದ ಮಾಹಿತಿ ನೀಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿ ಇನಾಮ್ಯುಯೆಲ್‌ ಮಾತನಾಡಿ, ಬೆಂಕಿ ಅನಾಹುತಗಳು ನಡೆದ ಸಂದರ್ಭದಲ್ಲಿ ಗೃಹರಕ್ಷಕರು ಕೈಗೊಳ್ಳಬೇಕಾದ ತುರ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಠ ದೀಪಕ ಗೋಕರ್ಣ ಮಾತನಾಡಿ ಈ ತರಬೇತಿಯು ಗೃಹರಕ್ಷಕರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಹಾಯಕವಾಗಲಿದೆ. ತರಬೇತಿ ಸಮಯದಲ್ಲಿ ಶಿಸ್ತು, ಸಮಯ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಅವರು ಗೃಹರಕ್ಷಕರಿಗೆ ಕಿವಿ ಮಾತು ಹೇಳಿದರು.
ಕಾಯಕ್ರಮದಲ್ಲಿ ಚೆಂಡಿಯಾ, ಮಲ್ಲಾಪುರ ಘಟಕಾಧಿಕಾರಿಗಳು ಹಾಗೂ ಕಾರವಾರ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗೃಹರಕ್ಷಕ ದಳದ ಶಿರಸಿ ಘಟಕಾಧಿಕಾರಿ ಮಂಜು ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಗೃಹರಕ್ಷಕದಳದ ಕಾರವಾರ ಘಟಕಾಧಿಕಾರಿ ಎಸ್‌.ಕೆ.ನಾಯ್ಕ ಪ್ರಾರ್ಥಿಸಿದರು.

loading...