ಚುನಾವಣೆ ಎಂಬುವುದು ಯುದ್ಧ ಇದ್ದ ಹಾಗೆ: ದೇಶಪಾಂಡೆ

0
28
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಚುನಾವಣೆ ಎಂಬುವುದು ಯುದ್ಧ ಇದ್ದ ಹಾಗೆ. ಹಿಂದಿನ ಕಾಲದಲ್ಲಿ ಯುದ್ಧ ಮಾಡಬೇಕಾದರೆ ಆಯುಧಗಳನ್ನು ಹಿಡಿದುಕೊಂಡು ಯುದ್ಧ ಮಾಡಬೇಕಿತ್ತು. ಅದರಂತೆ ನಮ್ಮ ಚುನಾವಣೆ ಯುದ್ಧದಲ್ಲಿ ಆಯುಧಗಳಿಲ್ಲ ಅದರ ಬದಲಿಗೆ ನಾವು ಮಾಡಿರುವ ಜನಪರ ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಯುದ್ಧ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. 2018ರ ವಿಧಾನಸಭಾ ಚುನಾವಣೆ ಕೇವಲ ಯಲ್ಲಾಪುರ-ಮುಂಡಗೋಡ ಕ್ಷೇತ್ರ, ಕಾರವಾರ ಜಿಲ್ಲೆ, ಅಥವಾ ಕರ್ನಾಟಕ ರಾಜ್ಯದ ಚುನಾವಣೆ ಅಲ್ಲ. ಇಡೀ ದೇಶದ ದಿಕ್ಸೂಚಿಯಾಗಬಹುದಾದ ಚುನಾವಣೆಯಾಗಿದೆ. 2019ರಲ್ಲಿ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕಾಗಿದೆ. ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಬೆಳೆ ಸಾಲ ಮನ್ನಾ ಮಾಡಲು ಮೋದಿಯವರಿಗೆ ಯಾಕೆ ಆಗುತ್ತಿಲ್ಲ. ಇದರಿಂದ ತಿಳಿಯುತ್ತದೆ ಬಿಜೆಪಿ ಸರ್ಕಾರ ರೈತಪರ ಸರ್ಕಾರ ಅಲ್ಲ ಎಂಬುದು ಎಂದು ಹೇಳಿದರು. ನಾನು 7 ಮುಖ್ಯಮಂತ್ರಿ ಮಂಡಲದಲ್ಲಿ ಕೆಲಸ ಮಾಡಿದ್ದೇನೆ. ಹಿಂದಿನ ಎಲ್ಲಾ ಸರ್ಕಾರಗಳು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿವೆ. ಅದರಂತೆ ನಮ್ಮ ಸಿದ್ದರಾಮಯ್ಯನವರ ಸರ್ಕಾರ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ್ದಾರೆ.

ಈ ಭಾಗದ ಶಾಸಕ ಹೆಬ್ಬಾರ ಒಬ್ಬ ಕ್ರೀಯಾಶೀಲ ವ್ಯಕ್ತಿ. ಅವರು ತಮ್ಮ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಸರ್ಕಾರದಿಂದ ತಂದಿದ್ದಾರೆ. ಕಾರ್ಯಕರ್ತರು ಇದು ಹೆಬ್ಬಾರವರ ಚುನಾವಣೆ ಎಂದು ತಿಳಿಯದೇ ನನ್ನ ಚುನಾವಣೆ ಎಂದು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಜಿಲ್ಲಾ ಕೆ.ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಅಧ್ಯಕ್ಷ ರವಿಗೌಡ ಪಾಟೀಲ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಪ.ಪಂ.ಅಧ್ಯಕ್ಷ ರಫೀಕ್ ಇನಾಮದಾರ, ಪಿ.ಎಸ್.ಸಂಗೂರಮಠ, ಕೃಷ್ಣ ಹಿರೇಹಳ್ಳಿ, ಫಕ್ಕೀರಸ್ವಾಮಿ ಗುಲ್ಯಾನವರ ಹಾಗೂ ಇತರರಿದ್ದರು.

loading...