ಚುನಾವಣೆ ಮದ್ಯಮುಕ್ತವಾಗಿ ನಡೆಸಬೇಕೆಂದು ಒತ್ತಾಯ

0
10
loading...

ಕನ್ನಡಮ್ಮ ಸುದ್ದಿ-ಶಿರಸಿ: ಮತದಾರರಿಗೆ ಸ್ವಾಭಿಮಾನದಿಂದ ಮತಚಲಾಯಿಸಲು ಈ ಬಾರಿಯ ಚುನಾವಣೆ ಮದ್ಯಮುಕ್ತವಾಗಿ ನಡೆಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉತ್ತರ ಕನ್ನಡ ಘಟಕ ಒತ್ತಾಯಿಸಿದೆ.
ಶಿರಸಿಯ ಯೋಜನಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಜಾಗೃತ ಬರಹಗಳ ಕರಪತ್ರ ಬಿಡುಗಡೆ ಮಾಡಿದ ವೇದಿಕೆಯ ಯೋಜನಾಧಿಕಾರಿ ತಿಮ್ಮಪ್ಪ ನಾಯ್ಕ, ವೇದಿಕೆಯು ರಾಜ್ಯದ 30 ಜಿಲ್ಲೆಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಚಿಕಿತ್ಸೆ ನೀಡಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 1187ಕ್ಕೂ ಮಿಕ್ಕಿ ಮದ್ಯವರ್ಜನ ಶಿಬಿರ ನಡೆಸಿ 2 ಲಕ್ಷಕ್ಕೂ ಮಿಕ್ಕಿದ ಜನರಿಗೆ ಮದ್ಯಮುಕ್ತರಾಗಲು ನೆರವಾಗಿದೆ. ವಾರ್ಷಿಕ 1.5 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ನಡುವೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಅಕ್ರಮ ಚಟುವಟಿಕೆ ಹೆಚ್ಚುವ ಸಾಧ್ಯತೆ ಇದೆ. ರಾಜ್ಯದಲ್ಲಿರುವ ಬಹುತೇಕ ಮದ್ಯದ ಅಂಗಡಿಗಳು ಜನಪ್ರತಿನಿಧಿಗಳ ಹತೋಟಿಯಲ್ಲಿವೆ. ಹಾಗಾಗಿ ಚುನಾವಣೆ ವೇಳೆ ಮದ್ಯದ ಹೊಳೆ ಹರಿಯುವ ಸಾಧ್ಯತೆಯಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳ ಪ್ರಮುಖರು ತಮ್ಮ ಸ್ವಾರ್ಥಕ್ಕೆ ಈ ಚುನಾವಣೆಯನ್ನು ಬಳಸಿಕೊಳ್ಳಬಾರದು. ಮತದಾರರಿಗೆ ಯಾವುದೇ ಮದ್ಯ, ಬಾಡೂಟ ಮತ್ತು ಹಣದ ಆಮಿಷ ಒಡ್ಡದೆ ಸ್ವಾಭಿಮಾನದಿಂದ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಚುನಾವಣೆ ಸಂದರ್ಭದಲ್ಲಿ ಹಲವು ಹೊಸ ಕುಡುಕರು ಸೃಷ್ಟಿಯಾಗುತ್ತಾರೆ. ನೀತಿ ಸಂಹಿತೆ ಎಷ್ಟೇ ಬಿಗಿ ಇದ್ದರೂ ಕದ್ದು ಮುಚ್ಚಿ ಮದ್ಯಪಾನ ಹಂಚುವ, ಆಮಿಷ ಒಡ್ಡುವ ಪ್ರಕ್ರಿಯೆ ನಡೆಯುತ್ತದೆ. ಇಂತಹ ಘಟನೆಗಳು ನಡೆದಲ್ಲಿ ಸಾರ್ವಜನಿಕರು ಎಚ್ಚೆತ್ತು ಚುನಾವಣಾ ಅಧಿಕಾರಿಗಳಿಗೆ, ಜಿಲ್ಲಾಡಳಿತ, ತಹಶೀಲ್ದಾರ, ಪೊಲೀಸರಿಗೆ ಸಾರ್ವಜನಿಕರು ದೂರು ನೀಡಬೇಕು ಎಂದ ಅವರು, ಆರಿಸಿ ಬರುವ ಸರ್ಕಾರ ರಾಜ್ಯದಲ್ಲಿ ಮದ್ಯಪಾನ ನಿಶೇಧ ಮಾಡಬೇಕು ಎಂದು ಒತ್ತಾಯಿಸಿದರು. ಯಾವುದೇ ಆಮಿಷಕ್ಕಾಗಿ ತಮ್ಮ ವ್ಯಕ್ತಿತ್ವವನ್ನು ಮಾರಿಕೊಂಡು ಮತ ಚಲಾಯಿಸಬಾರದು ಎಂದು ಕೋರಿದರು.
ಈ ವೇಳೆ ಯೋಜನೆಯ ಪ್ರಮುಖರಾದ ಸುಭಾಶ್ ನಾಯ್ಕ, ವಿವೇಕ ರಾಯ್ಕರ್, ಸಂಧ್ಯಾ ಕುರ್ಡೆಕರ್, ಗೌರಿ ನಾಯ್ಕ, ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಹಾಗೂ ಇತರರು ಇದ್ದರು.

loading...