ಜನತೆಗೆ ಉತ್ತರಿಸುವಂತೆ ಘೋಟ್ನೇಕರಗೆ ರಾಜು ಧೂಳಿ ಸವಾಲ್

0
13
loading...

ನಾಗರಾಜ ಶಹಾಪುರಕರ
ಕನ್ನಡಮ್ಮ ಸುದ್ದಿ-ಹಳಿಯಾಳ: ವಿಧಾನಸಭಾ ಚುನಾವಣೆ ಕಾವು ಒಂದೆಡೆ ಏರುತ್ತಿದ್ದರೆ ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಹಾಗೂ ಸ್ಥಳೀಯ ಭಾಜಪ ಚಟುವಟಿಕೆಗಳಿಂದ ದೂರವುಳಿಸಲಾಗಿರುವ ಮುಖಂಡ ರಾಜು ಧೂಳಿ ಇವರುಗಳ ನಡುವೆ ಜಗಳ್‍ಬಂದಿ ಆರಂಭಗೊಂಡಿದೆ.

ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಅವರು ತನ್ನ ಬಗ್ಗೆ ಮಾತನಾಡಿದ ಒಂದೆರಡು ವಾಕ್ಯಗಳು ರಾಜು ಧೂಳಿಯವರನ್ನು ಕೆಣಕಿದಂತೆ ಮಾಡಿವೆ. ಇದರ ಪ್ರತಿಯಾಗಿ ಧೂಳಿ ಹೇಳಿಕೆ ಘೋಟ್ನೇಕರರಿಗೆ ಸಿಟ್ಟು ಬರಿಸಿದೆ.
ಕೆಲ ದಿನಗಳ ಹಿಂದೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಸ್.ಎಲ್. ಘೋಟ್ನೇಕರ ಅವರು ಮಾತನಾಡುತ್ತಾ ಸ್ಥಳೀಯ ಭಾಜಪ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ದಿಗ್ಬಂಧನಕ್ಕೊಳಗಾಗಿರುವ ರಾಜು ಧೂಳಿ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ. ಸ್ಥಳೀಯ ಸಂಘ-ಸಂಸ್ಥೆಯ ಇಲ್ಲವೇ ಪ್ರಮುಖವಾದ ಒಂದೂ ಚುನಾವಣೆಯಲ್ಲಿ ಗೆಲ್ಲದೇ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗದ ರಾಜು ಧೂಳಿ ಓರ್ವ ನಾಯಕನೇ ಅಲ್ಲ. ಹೀಗಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತೆಗೆದುಕೊಳ್ಳದಂತೆ ನಾನು ನೋಡಿಕೊಂಡಿದ್ದೇನೆ ಎಂದಿದ್ದರು.

ಘೋಟ್ನೇಕರ ಅವರ ಈ ಮಾತು ರಾಜು ಧೂಳಿಯನ್ನು ಕೆಣಕಿಸಿತು. ಭಾಜಪ ಅಭ್ಯರ್ಥಿಯಾಗಿರುವ ಸುನೀಲ ಹೆಗಡೆ ಯವರೊಂದಿಗೆ ಆಗಿದ್ದ ವೈಮನಸ್ಸು ಅತಿರೇಕಗೊಂಡ ಪರಿಣಾಮ ರಾಜು ಹಾಗೂ ಸುನೀಲ ಇವರುಗಳ ನಡುವೆ ಘರ್ಷಣೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸುನೀಲ ಹೆಗಡೆ ಹಾಗೂ ಕ್ಷೇತ್ರದ ಪ್ರಮುಖ ಪದಾಧಿಕಾರಿಗಳು ಪಕ್ಷದ ರಾಜ್ಯ ವರಿಷ್ಠರಲ್ಲಿ ದೂರು ನೀಡಿದ ಕಾರಣ ರಾಜು ಧೂಳಿ ಅವರನ್ನು ರಾಜ್ಯ ವರಿಷ್ಠರು ಪಕ್ಷದ ಚಟುವಟಿಕೆಗಳಿಂದ ತಟಸ್ಥವಾಗಿರುವಂತೆ ಸೂಚಿಸಿದ್ದರು. ಆದರೂ ಸಹ ಅವರು ರಾಜ್ಯ ಪರಿಷತ್ ಸದಸ್ಯತ್ವ ಸ್ಥಾನದಲ್ಲಿ ಮುಂದುವರಿದಿದ್ದರು.
ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಆರ್.ವಿ. ದೇಶಪಾಂಡೆಯವರ ಒಡನಾಡಿಯಾಗಿರುವ ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಅವರಿಗೆ ರಾಜು ಧೂಳಿ ಮಾಡಿರುವ ಆರೋಪದಲ್ಲಿ ಒಂದು ಅಂಶವು ಇರುಸು-ಮುರುಸು ಉಂಟಾಗುವಂತೆ ಮಾಡಿತು. ಘೋಟ್ನೇಕರ ಅವರು ಭಾಜಪ ಸೇರುವುದಾಗಿ ಹೇಳಿ ಕೇಂದ್ರ ಸರ್ಕಾರದ ಜನೌಷಧಿ (ಪಿಎಂಬಿಜೆಪಿ) ಔಷಧಿ ಅಂಗಡಿಯನ್ನು ಪಡೆದಿದ್ದು ಈ ಬಗ್ಗೆ ಜನತೆಗೆ ಉತ್ತರಿಸುವಂತೆ ರಾಜು ಧೂಳಿ ಸವಾಲೆಸೆದಿದ್ದಾರೆ.
ಘೋಟ್ನೇಕರ-ರಾಜು ಧೂಳಿ ನಡುವಿನ ಈ ಜಗಳಬಂದಿ ಜನರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಔಷಧಿ ಕೇಂದ್ರವು ಕೇಂದ್ರ ಬಿಂದುವಾದ ಈ ವಿಷಯದ ವಿವಾದ ಯಾವ-ಯಾವ ತಿರುವು ಪಡೆಯಬಹುದು ಎಂದು ಕಾದು ನೋಡಬೇಕಾಗಿದೆ.

loading...