ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ನೀಡಿ : ದೊಡ್ಡಮನಿ

0
34
loading...

ಶಿರಹಟ್ಟಿ: ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದಲ್ಲಿ ಕಾಂಗ್ರಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದವರು.
ಮತದಾನ ಮಾಡದಿದ್ದರೇ ಯಾವುದೆ ಫಲಾಪೇಕ್ಷೆ ಕೇಳಲು ಆಗದು. ಹೋಗಲಿ ಬಿಡು ಎಂಬ ಉದಾರ ಭಾವ ಬರುತ್ತದೆ. ಆದರೆ ಮತ ಚಲಾಯಿಸಿದಾಗ ಹಕ್ಕಿನಿಂದ ಕೆಲಸ ಮಾಡಿ ಎಂದು ಹೇಳಲು ಬರುತ್ತದೆ. ತಮ್ಮ ಅಮೂಲ್ಯವಾದ ಮತವನ್ನು ಯೋಗ್ಯ, ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗೆ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಕಳೆದ ಐದು ವರ್ಷದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇನ್ನೂ ಅಭಿವೃದ್ದಿ ಕೆಲಸಗಳನ್ನು ಮಾಡುವ ಮನಸ್ಸಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ತರುವ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಭರವಸೆ ನೀಡಿ ಮತಯಾಚಿಸಿ ಹೋಗುವ ವ್ಯಕ್ತಿತ್ವ ನನ್ನಲ್ಲಿ ಇಲ್ಲ. ಕಳೆದ ಐದು ವರ್ಷಗಳಲ್ಲಿ 3.480 ಕೋಟಿ ಅನುದಾನವನ್ನು ತರುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದೇನೆ. ಒಂದು ದೂರವಾಣಿ ಕರೆ ಮಾಡಿ ಹೇಳಿದರೂ ಸಹ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ್ದು ಅದೇ ರೀತಿ ಮುಂದೆಯೂ ಸಹ ಸ್ಪಂದಿಸುತ್ತೇನೆ. ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲಿ ಆಯ್ಕೆ ಮಾಡಿ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡಿದರು.
ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ಹುಮಾಯೂನ ಮಾಗಡಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ರಾಜ್ಯದ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು. ಮುಖ್ಯಮಂತ್ರಿಗಳು ಚುನಾವಣೆ ಸಂದರ್ಭದಲ್ಲಿ ನೀಡಿದ್ದ 165 ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದ್ದು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಜೀವನ ಮಾಡುವುದು ಕಷ್ಟಕರವಾಗಿದೆ. ರಾಜ್ಯದ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಅನುದಾನ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸಿತು .ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವದರೊಂದಿಗೆ ಜನಪರ ಕಾಳಜಿಯುಳ್ಳ ರಾಮಕೃಷ್ಣ ದೊಡ್ಡಮನಿರವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಾಯ್.ಎಸ್ ಪಾಟೀಲ, ಎ.ವಾಯ್ ನವಲಗುಂದ, ಮಹೇಂದ್ರ ಮುಂಡವಾಡ, ಪಪಂ ಅಧ್ಯಕ್ಷ ಬುಡನಶ್ಯಾ ಮಕಾನದಾರ, ಉಪಾಧ್ಯಕ್ಷೆ ಕಾಶವ್ವ ಹುಲಕಡ್ಡಿ, ಸದಸ್ಯೆ ಬಡಗೇರ, ಸದಸ್ಯ ಸಂತೋಷ ಕುರಿ, ಮಂಜುನಾಥ ಘಂಟಿ, ಪಿ.ವಿ ಪರಬ, ಯಲ್ಲಪ್ಪಗೌಡ್ರ ಅಣ್ಣಿಗೇರಿ, ಪಾಶ್ಚಾಪೂರ, ಅಲ್ಲಿ ನಗಾರಿ, ಹೊನ್ನಪ್ಪ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

loading...