ಜಲ ಸಂಗ್ರಹ ಟ್ಯಾಂಕ್ ನಿರ್ಮಾಣ : ಕೋಟ್ಯಾಂತರ ರೂ.ಗಳ ಅವ್ಯವಹಾರ

0
10
loading...

ಗದಗ: ಗದಗ-ಬೆಟಗೇರಿ ನಗರಕ್ಕೆ ಬೇಸಿಗೆ ದಿನದಲ್ಲಿ ನೀರು ಸರಬರಾಜು ಮಾಡಲು ಸಿಂಗಟರಾಯನಕೆರೆ ತಾಂಡಾಕ್ಕೆ ಹೋಗುವ ಮಾರ್ಗದಲ್ಲಿ ಸರ್ವೆ ನಂ. 96 ಹಾಗೂ 723 ರಲ್ಲಿ ಜಲ ಸಂಗ್ರಹಣೆ ಟ್ಯಾಂಕ್ ನಿರ್ಮಾಣ ಮಾಡುವ ಯೋಜನೆಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆದಿದ್ದು ಈ ಕುರಿತು ಲೋಕಾಯುಕ್ತ ತನಿಖೆಗೆ ನೀಡಲಾಗುವದು ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವ್ಹಿ.ಸಂಕನೂರ ಹಾಗೂ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.

ಶನಿವಾರ ಗದಗ ಜಿಲ್ಲಾ ಬಿಜೆಪಿ ಕಾರ್ಯಾಲದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಭಯತರು ಕರ್ನಾಟಕ ಅರ್ಬನ್ ಇನ್‍ಪ್ರಾಸ್ಟ್ರಕ್ಚರ್ ಡೆವಲೆಪಮೆಂಟ್ ಹಾಗೂ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ ಇವರು ಈ ಯೋಜನೆಯನ್ನು ಸಿದ್ದಪಡಿಸಿ ತಾತ್ವಿಕವಾಗಿ ಸರಕಾರದಿಂದ ಒಪ್ಪಿಗೆ ಪಡೆದು 10 ಕೋಟಿ ರೂ. ಹಣವನ್ನು ದಿನಾಂಕ 2-6-2017 ರಂದು ಮಂಜೂರಿ ಪಡೆದಿರುವದು. ಈ ಯೋಜನೆಗೆ ಡಿಪಿಆರ್ ಮತ್ತು ಟೆಕ್ನಿಕಲ್ ಕಮೀಟಿಯಿಂದ ಅಂತಿಮ ಒಪ್ಪಿಗೆಯನ್ನು ಪಡೆದಿರುವುದಿಲ್ಲ ಅಲ್ಲದೆ ಖಾಸಗಿ ಭೂ ಮಾಲೀಕರಿಂದ ಜಮೀನನ್ನು ವಶಪಡಿಸಿಕೊಂಡಿರುವುದಿಲ್ಲ (ಭೂಸ್ವಾಧೀನ). ಸರ್ವೆ ನಂ. 723 ಯಿಂದ ಖಾಸಗಿ ಭೂಮಾಲೀಕರಿಂದ ವಶಪಡಿಸಿಕೊಳ್ಳಬೇಕಾಗಿದೆ.
ಆಶ್ಚರ್ಯಕರ ಸಂಗತಿ ಏನೆಂದರೆ ಈ ಯೋಜನೆಯಲ್ಲಿ ನಿರ್ಮಾಣ ಮಾಡಬೇಕಾದ 3 ಟ್ಯಾಂಕ್‍ಗಳಲ್ಲಿ ಈಗಾಗಲೇ 2 ಟ್ಯಾಂಕ್‍ಗಳು ಅನಧಿಕೃತವಾಗಿ ನಿರ್ಮಾಣಗೊಂಡಿವೆ. 3ನೇ ಟ್ಯಾಂಕ್ ಕೂಡಾ ಸರಕಾರದ ಸರ್ವೆ ನಂ. 96 ಅನಧಿಕೃತವಾಗಿ ಸಧ್ಯ ನಿರ್ಮಾಣಗೊಳ್ಳುತ್ತಿರುವುದು.

ಈ ರೀತಿ ಅನಧಿಕೃತವಾಗಿ ಗಣಿಗಾರಿಕೆಯಿಂದ ನಿರ್ಮಾಣಗೊಂಡಿರುವ ಈ ಎಲ್ಲ ಕೆರೆಗಳನ್ನು ಗದಗ-ಬೆಟಗೇರಿ ನಗರಕ್ಕೆ ಬೇಸಿಗೆಯಲ್ಲಿ ನೀರು ಸರಬರಾಜು ಮಾಡಲು ರೂಪಿಸಿರುವ ಯೋಜನೆಗೆ ಬಳಸಿಕೊಳ್ಳುವಲ್ಲಿ ನಡೆದಿರುವ ಅವ್ಯವಹಾರವೇನು? ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.
ಜಲ ಸಂಗ್ರಹಣಾ ಟ್ಯಾಂಕ್ ನಿರ್ಮಾಣಕ್ಕೆ ಸರಕಾರದ ಅಂತಿಮ ಒಪ್ಪಿಗೆ ಇಲ್ಲದೆ ಈ ಎಲ್ಲ ಅನಧಿಕೃತ ಚಟುವಟಿಕೆ ನಡೆಯಲಿಕ್ಕೆ ಯಾರು ಜವಾಬ್ದಾರರು ? ಜಿಲ್ಲಾಧಿಕಾರಿಯೇ ? ಅಥವಾ ಜಿಲ್ಲಾ ಉಸ್ತುವಾರಿ ಸಚಿವರೇ ? ಗದಗ-ಬೆಟಗೇರಿಗೆ ಬೇಸಿಗೆ ದಿನದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರೂಪಿಸಿರುವ ಜಲಸಂಗ್ರಾಹಕ ಟ್ಯಾಂಕ್ ಯೋಜನೆಯನ್ನು ನಾವು ಸ್ವಾಗತ ಮಾಡುತ್ತೇವೆ ಆಧರೆ ಈ ಕಾರ್ಯವು ನಿಯಮಾನುಸಾರ ನಡೆಯಬೇಕು ಎಂದಿದ್ದಾರೆ.

ಸರಕಾರದ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಹಾಗೂ ಟೆಂಡರ್ ಪ್ರಕ್ರಿಯೆ ಮುಂತಾದ ಕ್ರಮಗಳನ್ನು ಪಾಲಿಸಬೇಕು. ಜಲ ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಮಾಡಲು ಸರಕಾರದಿಂದ ಅಂತಿಮ ಒಪ್ಪಿಗೆ ಸಿಗದಿದ್ದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಈ ಯೋಜನೆಯ ಶಂಕುಸ್ಥಾಪನೆಯನ್ನು ಅವಸರದಲ್ಲಿ ಏಕೆ ಮಾಡಿದರು ಎಂದು ಹಲವಾರು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಧುರೀಣರಾದ ಅನಿಲ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಎಂ.ಎಸ್.ಕರಿಗೌಡ್ರ, ಎಂ.ಎಂ.ಹಿರೇಮಠ, ಪ್ರಶಾಂತ ನಾಯ್ಕರ್, ಕಾಂತಿಲಾಲ ಬನ್ಸಾಲಿ, ಅನಿಲ ಅಬ್ಬಿಗೇರಿ, ಮಂಜುನಾಥ ಕೋಟ್ನೇಕಲ್, ಲಕ್ಷ್ಮಣ ದೊಡ್ಡಮನಿ ಮುಂತಾದವರಿದ್ದರು.

ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ಸರಕಾರಕ್ಕೆ ನಷ್ಠ
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆದಿದ್ದು ಇದರಿಂದಾಗಿ ಸರಕಾರಕ್ಕೆ ಕೋಟ್ಯಾಂತರ ರೂ.ಗಳಷ್ಟು ನಷ್ಠವಾಗಿದೆ ಎಂದು ಗದಗ ಬಿಜೆಪಿ ಧುರೀಣರಾದ ಅನಿಲ ಮೆಣಸಿನಕಾಯಿ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ಆರೋಪಿಸಿದ್ದಾರೆ.

ಶನಿವಾರ ಗದಗ ಜಿಲ್ಲಾ ಬಿಜೆಪಿ ಕಾರ್ಯಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಮುಂಡರಗಿ ರೋಡಿನಿಂದ ಸಿಂಗಟರಾಯನಕೆರೆ ತಾಂಡಾಕ್ಕೆ ಹೋಗುವ ಎಡ ಭಾಗದಲ್ಲಿ ಸರ್ವೆ ನಂ. 96 ಹಾಗೂ 723 ರಲ್ಲಿ ಅನಧಿಕೃತವಾಗಿ ದೊಡ್ಡ ಪ್ರಮಾಣದ ಕಲ್ಲು ಗಣಿಗಾರಿಕೆ ಕಳೆದ ನಾಲ್ಕು ವರ್ಷಗಳಿಂದ ಅವ್ಯಾಹತವಾಗಿ ನಡೆದಿದ್ದು ಇದರಿಂದ ಸರಕಾರಕ್ಕೆ ಹಲವಾರು ಕೋಟಿ ನಷ್ಠವಾಗಿದೆ.
ಸರಕಾರದಿಂದ ಕೆ.ಎನ್.ಆರ್ ಕನ್‍ಸ್ಟ್ರಕ್ಷನ್ ಲಿ., ಹೈದ್ರಾಬಾದ ಇವರಿಗೆ ಗಣಿ ಇಲಾಖೆಯಿಂದ ಸರ್ವೆ ನಂ. 723/27. 23 ಎಕರೆಯಲ್ಲಿ 12 ಎಕರೆ ಗಣಿಗಾರಿಕೆ ಮಾಡಲು ಮತ್ತು 4.5 ಎಕರೆ ಕೃಷರ್ ಹಾಕಲು ಅನುಮತಿ ನೀಡಲಾಗಿದೆ, ಆದರೆ ಕೆ.ಎನ್.ಆರ್ ಕನ್‍ಸ್ಟ್ರಕ್ಷನ್ ಲಿ., ಇವರು ಮತ್ತು ರೇಲೊನ್ ಕಂಪನಿಯವರು ಅನಧಿಕೃತವಾಗಿ ತಮ್ಮ ವ್ಯಾಪ್ತಿ ಬಿಟ್ಟು ಸರ್ವೆ ನಂ. 723 ರ ಉಳಿದೆಲ್ಲಾ ಭಾಗದಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಎರಡು ದೊಡ್ಡ ಪ್ರಮಾಣದ ಕಲ್ಲಿನ ಗಣಿಗಳನ್ನು ತೋಡಿದ್ದಾರೆ.

ಗಣಿಗಾರಿಕೆ ಚಟುವಟಿಕೆಯು ಸರ್ವೆ ನಂ. 723 ಮಾತ್ರವಲ್ಲದೆ ಕಳೆದ ಎರಡು ವರ್ಷಗಳಿಂದ ರೆವಿನ್ಯೂ ಲ್ಯಾಂಡ್ ಸರ್ವೆ ನಂ. 96ರಲ್ಲಿ ಕೂಡ ನಡೆದಿದೆ. ವಾಸ್ತವಿಕತೆ ಹೀಗಿರುವಾಗ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಲ್ಲಿ ಅಡಗಿರುವ ರಹಸ್ಯವೇನು ? ಆಂತರಿಕವಾಗಿ ಕಂಪನಿಯವರ ಜೊತೆಗೆ ಏನಾದರೂ ಒಪ್ಪಂದವಾಗಿದೆಯೇ? ಎಂದಿದ್ದಾರೆ.

loading...