ಜೀವನಮುಖಿ ಕಾವ್ಯಗಳನ್ನು ರಚಿಸಿದರೆ ಹೆಚ್ಚುಕಾಲ ಬದುಕುತ್ತವೆ: ಹೆಗಡೆ

0
22
loading...

ಕನ್ನಡಮ್ಮ ಸುದ್ದಿ-ಕುಮಟಾ: ಜೀವನಮುಖಿಯಾದ ಕಾವ್ಯಗಳನ್ನು ರಚಿಸಿದರೆ ಅಂತಹ ಕಾವ್ಯಗಳು ಹೆಚ್ಚುಕಾಲ ಬದುಕುತ್ತವೆ ಎಂದು ಯುವ ಕವಿ ಸಿದ್ಧಾಪುರದ ಮಂಜು ಹೆಗಡೆ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ನಿವೃತ್ತ ಶಿಕ್ಷಕಿ ಶಾರದಾ ಭಟ್‌ ಬರೆದ ಕವನ ಸಂಕಲನ “ಮನಸು” ಪುಸ್ತಕ ಬಿಡುಗಡೆ ಹಾಗೂ ಗಣೇಶಾಪ್ರಕಾಶನ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಮುಖಿಯಾದ ಬರಹಗಳಿಗೆ ಸಾವು ಇರುವುದಿಲ್ಲ. ಕಠಿಣ ಕಾವ್ಯಗಳು ಜನರನ್ನು ತಲುಪುವಲ್ಲಿ ವಿಫಲವಾಗುತ್ತದೆ. ಹಾಗಾಗಿ ಶಾರದಾ ಭಟ್ಟ ಬರೆದ ಸರಳ ಕಾವ್ಯಗಳು ಜನರನ್ನು ತಲುಪುತ್ತವೆ ಎಂದರು.
ಸಾಹಿತಿ ಡಾ ಶ್ರೀಪಾದ ಶೆಟ್ಟಿ ಹೊನ್ನಾವರ ಗಣೇಶಾ ಪ್ರಕಾಶನವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನ ಬಂಧನಕ್ಕೆ ಹಾಗೂ ಬಿಡುಗಡೆಗೆ ಆತನ ಮನಸ್ಸು ಕಾರಣವಾಗಿದೆ. ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವದರಿಂದಾಗಿ ವಯಸ್ಸನ್ನು ಮೀರಿ ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ. ಕಾವ್ಯಗಳು ಮನದಾಳದ ಭಾವನೆಗಳನ್ನು ಹೇಳುವ ಬರಹಗಳಾಗಬೇಕು ಎಂದರು.
ಕವನ ಸಂಕಲನವನ್ನು ಸಾಹಿತಿ ಅಂಕೋಲದ ಮಹಾದೇವ ನಾಯಕ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿದರು. ಪುಸ್ತಕ ಸಂಸ್ಕೃತಿ ಕುರಿತು ಪ್ರೊ ವಿ ಆರ್‌ ಜೋಶಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕಲಾ ಪ್ರತಿಭೆ ಸುರೇಶ ಗುನಗಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿಗಳಾದ ಬೀರಣ್ಣಾ ನಾಯಕ ಮೊಗಟಾ ಯಲ್ಲಾಪುರ, ಎನ್‌ ಎಸ್‌ ಹೆಗಡೆ ಹೊನ್ನಾವರ, ಕಸಾಪ ತಾಲೂಕಾಧ್ಯಕ್ಷ ಶ್ರೀಧರ ಗೌಡ, ಕೃಷ್ಣಮೂರ್ತಿ ಭಟ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ದೀಪಕ ಭಟ್‌ ಪ್ರಾರ್ಥಿಸಿದರು. ರೋಶಿನಿ ಭಟ್‌ ಸ್ವಾಗತಿಸಿದರು. ಶಾರದಾ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾ ಟಿಎಮ್‌ಆರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...