ಡಾ.ಜಗಜೀವನ್‌ರಾಂ ಆದರ್ಶ ಅನನ್ಯ: ಚಂದ್ರಶೇಖರ್‌

0
17
loading...

ಕಾರವಾರ: ಹಸಿರು ಕ್ರಾಂತಿಯ ಹರಿಕಾರ, ಸ್ವಾಂತಂತ್ರ್ಯ ಸೇನಾನಿ ಡಾ.ಬಾಬು ಜಗಜೀವನ್‌ರಾಮ್‌ ಅವರ ಆದರ್ಶಗಳು ಅನನ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಾಬು ಜಗಜೀವನ ರಾಂ ಅವರು ಅತ್ಯಂತ ಕೆಳಸಮುದಾಯದಲ್ಲಿ ಹುಟ್ಟಿ ಹಂತ ಹಂತವಾಗಿ ಬೆಳೆದವರು. ಅವರ ಜೀವಿತಾವಧಿಯ ಮಾನವೀಯ ಮೌಲ್ಯಗಳ ಹಲವಾರು ನಿಲುವುಗಳನ್ನು ತೆಗೆದುಕೊಂಡು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಹಿಂದುಳಿದ ಸಮುದಾಯಗಳು ಹೆಚ್ಚು ಭಾಗವಹಿಸುವಂತೆ ಪ್ರೇರೇಪಿಸಿದವರು ಜಗಜೀವನ ರಾಮ್‌ ಅವರು. ಅಲ್ಲದೆ ಅವರ ರಾಜಕೀಯ ಬದುಕಿನಲ್ಲಿ ಪಡೆದ ಅಧಿಕಾರಾವಧಿಯಲ್ಲಿ ಭಾರತದ ಆಹಾರ ಭದ್ರತೆಗಾಗಿ ಹಸಿರು ಕ್ರಾಂತಿ, ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳು ಹೀಗೆ ಹಲವಾರು ಪ್ರಗತಿಗೆ ನಾಂದಿ ಹಾಡಿದ್ದರು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸುರೇಶ್‌ ಇಟ್ನಾಳ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

loading...