ಧನಾತ್ಮಕ ಚಿಂತನೆಗಳಿಂದ ಸಾಧನೆ ಸಾಧ್ಯ: ಡಾ.ಆನಂದ ಶಿವಾಪುರ

0
26
loading...

ಚಿಕ್ಕೋಡಿ 21: ವಿದ್ಯಾರ್ಥಿಗಳು ಕೇವಲ ಗುರಿ ಹೊಂದಿದರೇ ಸಾಲದು, ಅದನ್ನು ಮುಟ್ಟಲು ಪರಿಶ್ರಮ ಪಡುವ ಜತೆಗೆ ಸೋಲು,ಗೆಲುವನ್ನು ಧನಾತ್ಮಕವಾಗಿ ಸ್ವೀಕರಿಸಿ ಮುಂದೆ ಸಾಗಬೇಕಾಗುತ್ತದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೆಶಕ ಡಾ.ಆನಂದ ಶಿವಾಪುರ ಹೇಳಿದರು.
ಇಲ್ಲಿನ ಕೆಎಲ್‍ಇ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಜೆ ಜರುಗಿದ ಸಂಭ್ರಮ-2018 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಎಲ್‍ಇ ಸಂಸ್ಥೆಯು ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅವರ ಕನಸಿನ ಕೂಸಾದ ಈ ಮಹಾವಿದ್ಯಾಲಯವು ಅತ್ಯಂತ ಕಡಿಮೆ ಸಮಯದಲ್ಲಿ ಆರೋಗ್ಯಯುತವಾಗಿ ಬೆಳೆದಿದೆ. ಪಟ್ಟಣ ಪ್ರದೇಶದಲ್ಲಿರುವ ಕಾಲೇಜುಗಳನ್ನು ಮೀರಿಸಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅಥಣಿಯ ಜೆ.ಎ.ಇ ಸೊಸೈಟಿಯ ಅಧ್ಯಕ್ಷ ಅರವಿಂದ ದೇಶಪಾಂಡೆ ಮಾತನಾಡಿ, ಚಿಕ್ಕೋಡಿ ಇಂಜಿಇಯರಿಂಗ್ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿರುವುದು ನನಗೆ ಸಂತಸ ತಂದಿದೆ. ಇಂಜೀನಿಯರಿಂಗ್ ವಿದ್ಯಾರ್ಥಿಗಳು ನಾವೀಣ್ಯತೆಯನ್ನು ಬೆಳೆಸಿಕೊಂಡು, ಶಿಕ್ಷಣದಲ್ಲಿ, ಸೌರಶಕ್ತಿಯ ಬಳಕೆಯಲ್ಲಿ, ಹಾಗೂ ರೈತರ ಸಮಸ್ಯೆಗಳಿಗೆ ಪರಿಹರಿಸುವತ್ತ ಹೊಸ-ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಪ್ರಯತ್ನಿಸಬೇಕು ಎಂದರು. ತಾವೆಲ್ಲರೂ ಕೇವಲ ನೌಕರಿಯ ಬೆನ್ನತ್ತದೇ, ಉದ್ಯೋಗ ಸೃಷ್ಟ್ತಿ ಗಮನ ಹರಿಸ ಬೇಕೆಂದರು. ಇಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‍ಇ ಸಂಸ್ಥೆ ನಿರ್ದೇಶಕ ಬಿ. ಆರ್. ಪಾಟೀಲ ಮಾತನಾಡಿ, ನಮ್ಮ ಕೆಎಲ್‍ಇ ಸಂಸ್ಥೆಯ ಚಿಕ್ಕೋಡಿ ಇಂಜಿನಿಯರಿಂಗ್ ಕಾಲೇಜು 2008 ಆರಂಭವಾಗಿದ್ದು, ಇಂದು ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಕೇವಲ 10 ವರ್ಷಗಳಲ್ಲಿ ನಮ್ಮ ಕಾಲೇಜು ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದೆ. ಕೆಎಲ್‍ಇ ಸಂಸ್ಥೆಯ ಮುಖ್ಯ ಉದ್ಧೇಶ ಗಡಿಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಇಲ್ಲಿಯ ವಿದ್ಯಾರ್ಥಿಗಳು ಯಾವುದೇ ಸಿಟಿಯ ದೊಡ್ಡ-ದೊಡ್ಡ ಕಾಲೇಜುಗಳ ವಿದ್ಯಾರ್ಥಿಗಳಿಗೂ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಈ ವರ್ಷ ಇಲ್ಲಿನ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಇನ್ನು ಬೇರೆ-ಬೇರೆ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಯಲಿವೆ. ಮುಂಬರುವ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಇನ್ನು ಹೆಚ್ಚು ಸಾಧಿಸಿ ತೋರಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಸಿದ್ರಾಮಪ್ಪ ಇಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ವಿ.ಕೆ ಪಾಟೀಲ ವಾರ್ಷಿಕ ವರದಿ ಓದಿದರು. ಅಕ್ಷಯ ಪರಿಚಯಿಸಿದರು.ಚೇತನ ನರಸಗೊಂಡಾ ವಂದಿಸಿದರು. ಸಚೀನ ಬಾಳೆ ಮತ್ತು ಶೃತಿ ಲಡಗೆ ನಿರೂಪಿಸಿದರು.

loading...