ನದಿಗೆ ನೀರು ಹರಿಸಲು ಆಗ್ರಹಿಸಿ ಬ್ಯಾರೇಜ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ

0
22
loading...

ಮುಂಡರಗಿ: ತಾಲೂಕಿನ ಹಮ್ಮಿಗಿ ಬ್ಯಾರೇಜ್‍ನಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಶಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, sಸೇರಿದಂತೆ ಮೊದಲಾದ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಸೋಮವಾರ ಹಮ್ಮೀಗಿ ಬ್ಯಾರೇಜ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ವೀರನಗೌಡ ಪಾಟೀಲ ಮಾತನಾಡಿ, ಈ ಭಾಗದ ರೈತರು ನೀರಾವರಿ ಯೋಜನೆಗಾಗಿ ಬೆಲೆಬಾಳುವ ಜಮೀನನ್ನು ಕಳೆದುಕೊಂಡಿದ್ದಾರೆ. ಆದರೆ, ಎಚ್.ಕೆ.ಪಾಟೀಲರು ಎಲ್ಲ ನೀರನ್ನು ಗದಗ-ಬೆಟಗೇರಿಗೆ ಒಯ್ಯುವ ಮೂಲಕ ಈ ಭಾಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಒಂದೆಡೆ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ, ಮತ್ತೊಂದೆಡೆ ಕುಡಿಯಲು ನೀರಿಲ್ಲದೆ ಜನರು ಸಂಕಷ್ಟದಲ್ಲಿ ದಿನಗಳೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ನದಿಗೆ ನೀರು ಹರಿಸಿ ಅಂದ್ರೆ ಸಚಿವ ಎಚ್.ಕೆ.ಪಾಟೀಲ ಹೇಳಿದ್ರೆ ನೀರು ಹರಿಸ್ತಿವಿ ಅಂತ ಹೇಳ್ತಾರೆ. ನೀರು ಎಚ್.ಕೆ.ಪಾಟೀಲನ ಅಪ್ಪನ ಆಸ್ತಿನಾ? ಎಚ್.ಕೆ.ಪಾಟೀಲರು ಗದಗ ಜಿಲ್ಲೆಗೆ ಉಸ್ತುವಾರಿ ಸಚಿವರೋ ಅಥವಾ ಗದಗಿಗೆ ಮಾತ್ರ ಸಿಮೀತವೋ ಕುಡಿಯಲು ನೀರಿಲ್ಲದೆ ಜನರು ಮತ್ತು ಜನುವಾರಗಳು ಪರಿತಪಿಸುವಂತಾಗಿದೆ ಎಂದರು.

ಹೋರಾಟಗಾರ ವೈ.ಎನ್.ಗೌಡರ ಮಾತನಾಡಿ, ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಶಾಸಕರು ನದಿ ನೀರನ್ನು ಅನವಶ್ಯಕವಾಗಿ ಕೆರೆಗಳಿಗೆ ತುಂಬಿಸಿದರು. ಇದರಿಂದಾಗಿ ನದಿಯ ನೀರು ಬೇಗ ಖಾಲಿಯಾಗುವಂತಾಯಿತು. ಈಗ ಇಡೀ ಜಿಲ್ಲೆಯ ಜನತೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ರೈತರು ಹಾಗೂ ಗ್ರಾಮಸ್ಥರು ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಯೋಜನೆಗಾಗಿ ಇಲ್ಲಿಯ ಜನರು ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಇಲ್ಲಿಯ ಜನರಿಗೆ ಕುಡಿಯುವ ನೀರಿಲ್ಲದೆ ನರಳಾಡುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಕ್ಷಣ ನದಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಡಿವೈಎಸ್ಪಿ ಎಸ್.ಎ.ಪಾಟೀಲ ಹಾಗೂ ಗದಗ ಕುಡಿಯುವ ನೀರಿನ ಯೋಜನೆಯ ಎಇಇ ಶ್ರೀನಿವಾಸ ಪಾಟೀಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು ಜಿಲ್ಲಾಧಿಕಾರಿಗಳು ಹಮ್ಮಿಗಿ ಬ್ಯಾರೇಜ್ ಎಇಇ ಹನುಮಂತಪ್ಪ ಅವರಿಗೆ 10 ದಿನಗಳವರೆಗೆ 200ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದಾರೆ. ಅದರಂತೆ ಈಗಾಗಲೆ ಬ್ಯಾರೇಜ್‍ನ ಎರಡು ಗೇಟ್‍ನಿಂದ ನೀರು ಬಿಡಲಾಗುತ್ತಿದೆ. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ತಮ್ಮ ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಪ್ರತಿಭಟನೆ ಹಿಂಪಡೆದರು.

ಇದೇ ಸಂದರ್ಭದಲ್ಲಿ ಬಸವರಾಜ ರಾಮೇನಹಳ್ಳಿ, ಕೊಟ್ರೇಶ ಬಳ್ಳೋಳ್ಳಿ, ಬಾಬುಜೀ ಮದ್ದಿಪಾಟೀಲ, ರವಿ ನಾಯಕ, ಫಕೀರೆಡ್ಡಿ ನೀರಲಗಿ, ಮೈಲಾರಪ್ಪ ಉದಂಡಿ, ಈರಣ್ಣ ಮುಂಡವಾಡ, ಅಶೋಕ ಶಿಗೇನಹಳ್ಳಿ, ಈರಣ್ಣ ಕವಲೂರ, ಈರಣ್ಣ ಮುಂಡವಾಡ, ನಾಗರಾಜ ಮದ್ದಿನ, ಹುಸೇನಬೀ ಹಮ್ಮಿಗಿ, ಬಸವ್ವ ಸಣ್ಣಯಪ್ಪನವರ, ರವಿ ನಾಯಕ್ ಅಶೋಕ ಸಿಗೇನಳ್ಳಿ, ಗಂಗಮಾಳವ್ವ ತಿಪ್ಪಾಪೂರ, ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

loading...