ನಾಗಯಕ್ಷೆ ಗೊ ಶಾಲೆ ಉದ್ಘಾಟನಾ ಸಮಾರಂಭ

0
25
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಗೋವುಗಳ ಶಕ್ತಿ ಅಪಾರವಾಗಿದ್ದು ವಿಶ್ವದ ಅಳಿವು ಉಳಿವು ಇಂದು ಗೋವಿನ ಅಳಿವು ಉಳಿವಿನ ಮೇಲೆ ನಿಂತಿದೆ ಎಂದು ಹೋಸಾಡ ಗೋಶಾಲಾ ಧರ್ಮದರ್ಶಿ ಹಾಗೂ ಶ್ರೀ ನಾಗಯಕ್ಷೆ ದೇವಿ ದೇವಸ್ಥಾನದ ಧರ್ಮದರ್ಶಿಳಲ್ಲೋರ್ವರಾದ ಮುರಳೀಧರ ಪ್ರಭು ಕುಮಟಾ ಹೇಳಿದರು.
ಅವರು ಇಲ್ಲಿನ ಶ್ರೀ ನಾಗಯಕ್ಷೇ ಧರ್ಮ ದೇವಿ ಸಂಸ್ಥಾನದ ವತಿಯಿಂದ ಆರಂಭಿಸಲಾದ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಗೋವಿನ ಶಕ್ತಿ ಅಪಾರವಾಗಿದ್ದು, ಮರೆಯಾಗುತ್ತಿರುವ ಗೋವಿನಿಂದಾಗಿ ಭೂಮಂಡಲವೇ ಸಂಕಷ್ಟದಲ್ಲಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ 125 ಕೋಟಿ ಗೋವುಗಳಿದ್ದವು, ಇಂದು 125 ಕೋಟಿ ಮಾನವರಿದ್ದಾರೆ, ಆದರೆ 25 ಕೋಟಿಯಷ್ಟೂ ಗೋವುಗಳಿಲ್ಲ. ಮರೆಯಾಗುತ್ತಿರುವ ಗೋವುಗಳನ್ನು ನಾವು ಜೋಪಾನ ಮಾಡದೇ ಇದ್ದರೆ ಮುಂದೆ ಭರತ ಭೂಮಿಗೇ ಅಪಾಯ ತಪ್ಪಿದ್ದಲ್ಲ ಎಂದರು.
ಎಲ್ಲಿಯ ತನಕ ನಮ್ಮ ದೇಶದಲ್ಲಿ ಗೋಹತ್ಯೆ ನಿಲ್ಲುವುದಿಲ್ಲವೋ ಅಲ್ಲಿಯ ತನಕ ಸುಭಿಕ್ಷೆ ಅಸಾಧ್ಯ. ಭಟ್ಕಳದಲ್ಲಿ ಗೋಶಾಲೆಯನ್ನು ತೆರೆದ ಶ್ರೀ ನಾಗಯಕ್ಷೆ ಸಂಸ್ಥಾನದ ರಾಮದಾಸ ಪ್ರಭುಗಳ ಕಾರ್ಯವನ್ನು ಶ್ಲಾಘಿಸಿದ ಅವರು ಗರುಡನ ನಾಡಿನಲ್ಲಿ ನಾಗರ ಪಂಚಮಿಯನ್ನು ಮಾಡಿದಂತೆ ಭಟ್ಕಳದಲ್ಲಿ ಗೋಶಾಲೆ ತೆರೆದಿದ್ದಾಗಿದೆ.
ನ್ಯಾಯವಾದಿ ಆರ್‌. ಆರ್‌. ಶ್ರೇಷ್ಟಿ ಮಾತನಾಡಿ ಭಟ್ಕಳದ ಪರಿಸ್ಥಿತಿಗೆ ಗೋಶಾಲೆಯೊಂದು ತೀರಾ ಅಗತ್ಯವಾಗಿತ್ತು. ಗೋ ರಕ್ಷಣೆಗೆ ಎಲ್ಲರೂ ಬದ್ಧರಾದಲ್ಲಿ ಮುಂದಿನ ದಿನಗಳಲ್ಲಿ ನಾವು ಎಲ್ಲೆಲ್ಲೂ ಗೋವುಗಳನ್ನು ಕಾಣಬಹುದು. ಯಾರೂ ಮಾಡದ ಕಾರ್ಯವನ್ನು ಮಾಡುವುದಕ್ಕಿಂತ ಜಗತ್ತಿಗೆ ಅಗತ್ಯವಾದ ಕಾರ್ಯವನ್ನು ಮಾಡುವುದು ಸೂಕ್ತ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ ಅವರು ಗೋಶಾಲೆಯನ್ನು ಸಂರಕ್ಷಿಸುವ ಜವಾಬ್ದಾರಿ ನಾಗರೀಕರದ್ದು ಎಂದರು. ಶಿರೂರಿನ ಡಾ. ಪ್ರಭಾಕರ ನಂಬಿಯಾರ್‌, ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ವೆಂಕಟೇಶ ಪ್ರಭು ಮಾತನಾಡಿದರು. ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಅವರು ಮಾತನಾಡಿ ಗೋಶಾಲೆಯನ್ನು ಮಾಡಿರುವ ಹಿಂದಿನ ಉದ್ದೇಶವನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಗೋಶಾಲೆಯಿಂದಲೇ ಗೋಕ್ಲಿನಿಕ್‌ ಮಾಡುವ ಉದ್ದೇಶವಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಉದಯ ಪ್ರಭು ಪ್ರಾರ್ಥಿಸಿದರು. ಕಿರಣ್‌ ಶ್ಯಾನುಭಾಗ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

loading...