ನಾನು ಕಾಂಗ್ರೆಸ್ ಏಜೆಂಟ ಅಲ್ಲ: ಪ್ರಕಾಶ ರೈ

0
11
loading...

ವಿಜಯಪುರ: ಪ್ರತಿಪಕ್ಷಗಳನ್ನು ಪ್ರಾಣಿ, ಪಕ್ಷಿಗಳಿಗೆ ಹೋಲಿಕೆ ಮಾಡಿ ಅಮೀತ್ ಶಾ ಕೇವಲವಾಗಿ ಮಾತನಾಡಿದ್ದಾರೆ. ಪ್ರತಿಪಕ್ಷಗಳು ಪ್ರಾಣಿ, ಪಕ್ಷಿ ಎಂದಾದರೆ ಅಮೀತ ಶಾ ಕರ್ನಾಟಕಕ್ಕೆ ಪುಂಗಿ ಊದಲು ಬರುತ್ತಾರಾ? ಎಂದು ಖ್ಯಾತ ಚಿತ್ರನಟ ಹಾಗೂ ಜಸ್ಟ್ ಆಸ್ಕಿಂಗ್ ಸಂಘಟನೆ ಸಂಚಾಲಕ ಪ್ರಕಾಶ ರೈ ಖಾರವಾಗಿ ಪ್ರಶ್ನಿಸಿದರು.
ವಿಜಯಪುರದ ಖಾಸಗಿ ಹೋಟಲ್‍ವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ನಾನು ಹಿಂದೂ ವಿರೋಧಿ ಅಲ್ಲವೇ ಅಲ್ಲ. ನಾನು ಮೋದಿ ವಿರೋಧಿ, ಅಮೀತ್ ಶಹಾ ವಿರೋಧಿ, ಅನಂತಕುಮಾರ ಹೆಗಡೆ ವಿರೋಧಿ, ಪ್ರತಾಪ್ ಸಿಂಹ ವಿರೋಧಿ. ಸೈದ್ಧಾಂತಿಕವಾಗಿ ನಾನು ಪ್ರಶ್ನೆ ಮಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿದ್ದಾರೆ. ನಾನು ಕೋಮುವಾದ ಪ್ರಚೋದಿಸುವ ಬಿಜೆಪಿಗೆ ಬೆಂಬಲಿಸಬೇಡಿ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಕಾಂಗ್ರೆಸ್ ಏಜೆಂಟ ಅಲ್ಲವೇ ಅಲ್ಲ. ಆದರೆ ಕೋಮುವಾದ ಮೊದಲು ತೊಲಗಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ರೈ ಹೇಳಿದರು.

ಕೋಮುವಾದ ದೇಶದ ದೊಡ್ಡ ಕ್ಯಾನ್ಸರ್‍ಆಗಿ ಬದಲಾವಣೆ ಆಗಿದೆ. ಒಂದು ಕೋಮಿನವರನ್ನು ಉದ್ದೇಶಿಸಿ ಅಸಂಸದೀಯ ಪದ ಬಳಕೆ ಮಾಡುವ ಅನಂತಕುಮಾರ ಹೆಗಡೆ ಅವರನ್ನು ಪ್ರಶ್ನಿಸಿದರೆ ತಪ್ಪಾ? ನಾನು ಈ ಪ್ರಶ್ನೆ ಮಾಡಿದ ಕಾರಣಕ್ಕಾಗಿಯೇ ನನ್ನ ವೈಯುಕ್ತಿಕ ಜೀವನವನ್ನು ಕೇಂದ್ರಿಕರಿಸಿ ಮಾತನಾಡತೊಡಗಿದ್ದಾರೆ ಎಂದರು.
ಮೊದಲು ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು. ನಂತರ ಮುಂದಿನದು ನೋಡಿಕೊಳ್ಳೋಣ, ನನ್ನ ಲಕ್ಷ್ಯ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದರ ಮೇಲೆ ಸಂಪೂರ್ಣ ಕೇಂದ್ರಿಕೃತವಾಗಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೂ ಅದರ ಬದ್ಧತೆಯನ್ನು ಸಹ ನಾನು ನೂರಕ್ಕೆ ನೂರರಷ್ಟು ಪ್ರಶ್ನಿಸುತ್ತೇನೆ, ಅದರಲ್ಲಿ ಎರಡು ಮಾತಿಲ್ಲ ಎಂದು ರೈ ಸ್ಪಷ್ಟಪಡಿಸಿದರು.

loading...