ನಾಯ್ಕಗೆ ತಪ್ಪಿದ್ದ ಕೈ ಟಿಕೆಟ್ ಅಸಮಾಧಾನ

0
7
loading...

ಕನ್ನಡಮ್ಮ ಸುದ್ದಿ-ಕುಮಟಾ: ಮೂರನೇ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಶುಕ್ರವಾರ ಪ್ರಕಟಗೊಂಡ ದಿನಕರ ಶೆಟ್ಟಿ ಅವರಿಗೆ ಟಿಕೆಟ್ ಘೋಷಿಸಿದ್ದರಿಂದ ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ಹಿಂದೂ ಪ್ರತಿಪಾದಕ ಸೂರಜ ನಾಯ್ಕ ಸೋನಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಅಭಿಮಾನಿ ಬಳಗದಲ್ಲಿ ಅಸಮಾಧಾನದ ಜ್ವಾಲೆ ಭುಗಿಲೆದ್ದಿದೆ. ಜೆಡಿಎಸ್ ಪಕ್ಷದಿಂದ ವಲಸೆ ಬಂದಿದ್ದ ದಿನಕರ ಶೆಟ್ಟಿ ಅವರಿಗೆ ಮಣೆ ಹಾಕಿದ ಬಿಜೆಪಿ ಪಕ್ಷ ಮೂಲ ಬಿಜೆಪಿ ಹಾಗೂ ಹಿಂದೂವಾದಿ ನಾಯಕನನ್ನು ಕಡೆಗಣಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಿಗ್ಗೆ ಸೂರಜ ನಾಯ್ಕ ಸೋನಿ ಅವರ ಮನೆಯಲ್ಲಿ ಸಭೆ ಸೇರಿದ್ದ ನೂರಾರು ಕಾರ್ಯಕರ್ತರು ಮುಂದಿನ ನಡೆಯ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ವಿರುದ್ಧ ಕಿಡಿಕಾರಿದ ಸೂರಜ ಅಭಿಮಾನಿಗಳು ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಬೆಂಕಿಕಾರಿದ್ದಲ್ಲದೇ ಅನಂತಕುಮಾರ ಹೆಗಡೆ ವಿರುದ್ಧ ಘೋಷಣೆ ಕೂಗಿ ತಮ್ಮ ತೀವ್ರ ಅಸಮಾಧಾನವನ್ನು ಹೊರ ಹಾಕಿದರು. ಸೂರಜ ನಾಯ್ಕ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವದಾಗಿ ಹೇಳಿದ ಅಭಿಮಾನಿಗಳು ಬಿಜೆಪಿ ವಿರುದ್ಧ ರೋಷ ಹೊರ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಟಿಕೇಟ್ ಪ್ರಭಲ ಆಕಾಂಕ್ಷಿಯಾಗಿದ್ದ ಯಶೋಧರ ನಾಯ್ಕ ಅವರು ಸೂರಜ ನಾಯ್ಕ ಮನೆಗೆ ಭೇಟಿ ನೀಡಿ ಅವರ ಅಭಿಮಾನಿಗಳ ಜೊತೆ ಸುದೀರ್ಘ ಸಮಯದವರೆಗೆ ಸಮಾಲೋಚನೆ ನಡೆಸಿದರು. ಉಭಯ ನಾಯಕರಲ್ಲಿ ಒಬ್ಬರು ಪಕ್ಷೇತರರಾಗಿ ಕಣಕ್ಕಿಳಿಸುವ ಕುರಿತು ಚರ್ಚೆಗಳು ಗಂಭೀರವಾಗಿ ನಡೆದವು. ತನ್ನ ನಿರ್ಣಯವನ್ನು ಬಿಚ್ಚಿಡದ ಸೂರಜ ನಾಳೆ ಈ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸುವದಾಗಿ ಹೇಳಿದ್ದಾರೆ. ಆದರೆ ಇಬ್ಬರಲ್ಲಿ ಒಬ್ಬರು ಅಂತು ಕಣಕ್ಕಿಳಿಯುವ ಸೂಚನೆ ಗೋಚರಿಸುತ್ತಿದೆ. ಒಟ್ಟಾರೆ ಕುಮಟಾ ಬಿಜೆಪಿಯಲ್ಲಿ ಬಂಡಾಯದ ಕಹಳೆ ಆ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಲಿದೆ.

loading...