ನಿರ್ವಹಣೆಯಿಲ್ಲದ ಕೇಂದ್ರೀಯ ಸಸ್ಯೋದ್ಯಾನ

0
24
loading...

ಕನ್ನಡಮ್ಮ ಸುದ್ದಿ-ಶಿರಸಿ: ನಿರ್ವಹಣೆಗೆ ಸೂಕ್ತ ಅನುದಾನವಿಲ್ಲದೇ ಇಲ್ಲಿನ ಚಿಪಗಿ ಬಳಿ ಇರುವ ಕೇಂದ್ರೀಯ ನರ್ಸರಿ ಮತ್ತು ಪಾರ್ಕ ಸೊರಗುತ್ತಿದೆ. 10 ಎಕರೆ ಪ್ರದೇಶದ ಈ ಪಾರ್ಕ್ ಒಣಗಿ ನಿಂತ ಹುಲ್ಲುಗಾವಲಿನಂತೆ ಕಾಣುತ್ತಿದ್ದು ಅಪ್ರಯೋಜನಕವಾಗಿ ನಿಂತಿದೆ.
ಎರಡುವರೆ ದಶಕಗಳ ಹಿಂದೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕವೇ ಕೇಂದ್ರೀಯ ನರ್ಸರಿ ಆರಂಭಿಸಿ, ಶಿರಸಿ ಭಾಗದ ಜನರಿಗೆ ವಿಶೇಷ ಪಾರ್ಕ್ ಆಗಲಿ ಎಂಬ ದೃಷ್ಟಿಕೋನದಡಿ ಪೂರಕ ಅಭಿವೃದ್ದಿ ಪ್ರಯತ್ನ ಕೂಡ ನಡೆದಿತ್ತು. ಆರಂಭದಲ್ಲಿ ಲಕ್ಷಾಂತರ ರೂಪಾಯಿ ಅನುದಾನ ಬಂದು ಉತ್ತಮ ರೀತಿ ಅಭಿವೃದ್ದಿ ಕಂಡಿತ್ತು. ನರ್ಸರಿಯಲ್ಲಿ ವಿವಿಧ ವ್ಯವಸ್ಥೆಯ ಮೂಲಕ ಸಸ್ಯಗಳನ್ನು ಬೆಳೆಸಲಾಯಿತು. ಜೊತೆಗೆ ಗಾರ್ಡನ್ ಮಾದರಿಯಲ್ಲೂ ಅಭಿವೃದ್ದಿ ನಡೆದು, ಬರುವ ಜನರು ಕುಳಿತುಕೊಳ್ಳಲು ತಂಗುದಾಣ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಒಳಗೆ ಚಿಕ್ಕ ಕಟ್ಟಡ ಕಟ್ಟಿ ಸರ್ವೆ ಅರಣ್ಯ ಅಧಿಕಾರಿ ಕಚೇರಿ ನಡೆಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತ ಸಾಮಾಜಿಕ ಅರಣ್ಯ ಕಚೇರಿ ಕಾರ್ಯ ನಿರ್ವಹಣೆ ಈ ಕಟ್ಟಡದಲ್ಲಿ ನಡೆಯುತ್ತಿದೆ. ಈ ಹಿಂದಿನ ಐದಾರು ವರ್ಷಗಳವರೆಗೂ ಬಿಡುಗಡೆಯಾಗುತ್ತಿದ್ದ ಅಲ್ಪಸ್ವಲ್ಪ ಅನುದಾನದಲ್ಲಿ ನಿರ್ವಹಣೆ ನಡೆಸಲಾಗುತ್ತಿತ್ತು. ನಿತ್ಯ ನೂರಾರು ಜನರು ವಾಕಿಂಗ್ ಮಾಡಿ ಗಾರ್ಡನ್ ವೀಕ್ಷಿಸುತ್ತಿದ್ದರು. ಆದರೆ ಇದೀಗ ಇವೆಲ್ಲ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ.

ನಗರ ಸೌಂದರ್ಯೀಕರಣ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿರುವ ಜನಪ್ರತಿನಿಧಿಗಳು ಹೊಸ ಗಾರ್ಡನ್ ನಿರ್ಮಿಸುವ ಬದಲು ಈಗ ದುಸ್ಥಿತಿಯಲ್ಲಿರುವ ಇಂತಹ ಗಾರ್ಡನ್ ಅಭಿವೃದ್ದಿಪಡಿಸಿದರೆ ಸಹಕಾರಿಯಾಗುತ್ತದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. 10 ಎಕರೆ ಜಾಗದ ಈ ಪ್ರದೇಶದಲ್ಲಿ ಮಾದರಿ ಸಸ್ಯೋದ್ಯಾನ, ಮಕ್ಕಳ ಗಾರ್ಡನ್ ನಿರ್ಮಿಸಬೇಕು. ಇಲ್ಲದಿದ್ದರೆ ಹಾಳು ಸುರಿಯುತ್ತಿರುವ ಈ ಪಾರ್ಕ್ ಅತಿಕ್ರಮಣ ಆಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

loading...