ನೀರಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ

0
20
loading...

ಹುಬ್ಬಳ್ಳಿ: ನೀರಿಗಾಗಿ ಎರಡು ಕುಟುಂಬಗಳು ಹೊಡೆದಾಡಿಕೊಂಡಿರುವ ಘಟನೆ ಇಲ್ಲಿಯ ಗೊಲ್ಲರ ಓಣಿಯಲ್ಲಿ ನಡೆದಿದೆ. ಘಟನೆಯಲ್ಲಿ ಎರಡು ಕುಟುಂಬದ ಮೂರ್ನಾಲ್ಕು ಜನ ಸದಸ್ಯರಿಗೆ ಗಾಯಗಳಾಗಿವೆ. ಕಳೆದ ರಾತ್ರಿ ಗೊಲ್ಲರ ಕುಟುಂಬ ಹಾಗೂ ಚಿಕಲಗೇರ ಕುಟುಂಬದ ಸದಸ್ಯರ ನಡುವೆ ನೀರಿಗಾಗಿ ಜಗಳ ನಡೆದಿದ್ದು, ಪೊಲೀಸರು ಎರಡು ಕುಟುಂಬದವರನ್ನು ಠಾಣೆಗೆ ಕರೆಸಿಕೊಂಡು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಎರಡು ಗುಂಪುಗಳ ಮಧ್ಯೆ ನೀರಿನ ವಿಷಯವಾಗಿ ಆರಂಭವಾದ ಜಗಳ ವಿಕೋಪಕ್ಕೆ ತೆರಳಿ ಪರಸ್ಪರ ಕಲ್ಲು, ಬಡಿಗೆಗಳಿಂದ ಹೊಡೆದಾಡಿದ್ದಾರೆ.
ಎರಡು ಗುಂಪುಗಳು ಪರಸ್ಪರ ಅವರ ಮನೆ ಮೇಲೆ ಇವರು ಇವರ ಮನೆ ಮೇಲೆ ಅವರು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಪೊಲೀಸರು ಎರಡು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಆದ್ರೆ ಇಂದು ಬೆಳಗ್ಗೆ ಮತ್ತೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಡೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಎರಡು ಕುಟುಂಬದ ಸದಸ್ಯರನ್ನು ಚದುರಿಸಿ ಠಾಣೆಗೆ ಕರದೊಯ್ದಿದ್ದಾರೆ. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು ವ್ಯಾಪಕ ಬಂದೋಬಸ್ತ ಒದಗಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...