ನೀರಿನ ಸಮಸ್ಯೆಗೆ ಮುಂಜಾಗ್ರತಾ ಕ್ರಮ ವಹಿಸಿ

0
24
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೇಸಿಗೆಯ ತೀವ್ರತೆಗೆ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಉಷ್ಣಾಂಶದ ತೀವ್ರತೆಯಿಂದಾಗಿ ನೀರಿನ ಮೂಲಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಎರಡು ತಿಂಗಳುಗಳ ಕಾಲ ಬೇಸಿಗೆಯನ್ನು ಕಳೆಯುವುದು ಹೇಗೆಂಬ ಚಿಂತೆ ಮೂಡಿದೆ. ಕೆಲ ಗ್ರಾಮೀಣ ಭಾಗಗಳಲ್ಲಿ ಅಡಕೆ, ಬಾಳೆ, ತೋಟಗಳು ನೀರಿಲ್ಲದೇ ಒಣಗಿ ರೈತರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನ ಕಿರವತ್ತಿ, ಮದನೂರು, ಕಂಪ್ಲಿ ಹಾಗೂ ಹಾಸಣಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಜನತೆ ಬವಣೆ ಅನುಭವಿಸುತ್ತಾರೆ. ಈ ಬಾರಿ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಸಣ್ಣಯಲವಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಜನರು ತೀವ್ರ ಪರದಾಡುವಂತಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಸ್ಥಳೀಯ ಗ್ರಾ.ಪಂ ವತಿಯಿಂದ 14 ನೇ ಹಣಕಾಸು ಯೋಜನೆಯಡಿ ಬೋರ್‍ವೆಲ್ ಕೊರೆಸಲಾಗಿದ್ದು, ಕೇವಲ ಅರ್ಧ ಇಂಚು ನೀರು ಮಾತ್ರ ಬಂದಿದೆ. ಏಪ್ರಿಲ್ ತಿಂಗಳಲ್ಲಿ ಮತ್ತಷ್ಟು ನೀರಿನ ಅಭಾವ ಗೋಚರಿಸಲಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಟ್ಟಣ ವ್ಯಾಪ್ತಿಯ ಉದ್ಯಮನಗರ ಭಾಗದಲ್ಲಿ ಪ್ರತಿ ವರ್ಷದಂತೆ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆ ಇರುವುದು ಬಿಟ್ಟರೆ ಉಳಿದೆಡೆ ಯಾವುದೇ ತೊಂದರೆಯಿಲ್ಲ. ಪ.ಪಂ ವ್ಯಾಪ್ತಿಯ 18 ವಾರ್ಡ್‍ಗಳಲ್ಲಿ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಮಸ್ಯೆ ತಲೆದೋರಿದಲ್ಲಿ ಹೆಚ್ಚುವರಿಯಾಗಿ ಬೋರ್‍ವೆಲ್ ಕೊರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕೆ ಅಗತ್ಯ ಸಿದ್ಧತೆಯನ್ನು ಪ.ಪಂ ಮಾಡಿಕೊಂಡಿದೆ.

loading...