ನೀರು ಸರಬರಾಜು ಮಾಡದ ಗ್ರಾಪಂಗೆ ಬೀಗ ಜಡಿದ ಗ್ರಾಮಸ್ಥರು

0
20
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಪಟ್ಟಣದ ಹೊರವಲಯದ ಹಲಕರ್ಣಿ, ಗಾಂಧೀನಗರ ಬಡಾವಣೆಗಳಿಗೆ ಕಳೆದ 15 ದಿನಗಳಿಂದ ನೀರು ಸರಬರಾಜು ಮಾಡದಿರುವ ಹಲಕರ್ಣಿ ಗ್ರಾಮ ಪಂಚಾಯ್ತಿಯ ಕಾರ್ಯವೈಖರಿಯನ್ನು ಖಂಡಿಸಿದ ಉಭಯ ಬಡಾವಣೆಗಳ ನಿವಾಸಿಗಳು ಸೋಮವಾರ ಗ್ರಾಪಂ ಕಚೇರಿಯ ಮುಂಭಾಗದಲ್ಲಿ ಖಾಲಿ ಕೊಡ ಪ್ರದರ್ಶಿಸುವ ಮೂಲಕ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಕೈಗೊಂಡರು.
ಮುಂಜಾನೆ ಪಂಚಾಯ್ತಿ ಕಚೇರಿ ಎದುರು ಸೇರಿದ ಹಲಕರ್ಣಿ, ಗಾಂಧೀನಗರ, ಮರೆಮ್ಮ ಕಾಲನಿ, ಇಂದಿರಾ ನಗರ ಪ್ರದೇಶದ ಮಹಿಳೆಯರು, ನೀರಿನ ಸಮಸ್ಯೆ ಕುರಿತು ಈಗಾಗಲೇ ಹಲವು ಬಾರಿ ಗ್ರಾಪಂ ಕಚೇರಿಯ ಗಮನ ಸೆಳೆದರೂ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿಲ್ಲ. ಈ ಬಡಾವಣೆಗಳಲ್ಲಿ ಚರಂಡಿ ಸ್ವಚ್ಛತೆಯತ್ತ ಗಮನಹರಿಸಿಲ್ಲ. ನಾಗರಿಕರ ಸಮಸ್ಯೆ ತೋಡಿಕೊಳ್ಳಲು ಗ್ರಾಪಂ ಕಚೇರಿಗೆ ಆಗಮಿಸಿದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೀಗ ಜಡಿದು ಹೋರಾಟ ಮಾಡಲಾಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಜಿಪಂ ಸಿಇಒ ರಾಮಚಂದ್ರನ್ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಅನುಭವಿಸುತ್ತಿರುವ ಬವಣೆಯನ್ನು ಅವರ ಗಮನಕ್ಕೆ ತಂದರು. ನಾಗರಿಕರ ಸಮಸ್ಯೆ ಆಲಿಸಿದ ಜಿಪಂ ಸಿಇಒ ಈ ವಿಷಯದ ಬಗ್ಗೆ ತಾಪಂ ಇಒ ಅವರಿಂದ ಮಾಹಿತಿ ಸಂಗ್ರಹಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಹಲಕರ್ಣಿ, ಗಾಂಧೀನಗರ, ಮರೆಮ್ಮ ಕಾಲನಿ, ಇಂದಿರಾ ನಗರ ಗ್ರಾಮಸ್ಥರು ಪಾಲ್ಗೊಂಡಿದ್ದರು.

loading...