ನ್ಯಾಯಾಲಯದ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ: ನ್ಯಾ.ಶಿಲ್ಪಾ

0
15
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕಕ್ಷಿದಾರರು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಂಡರೆ ತಮ್ಮ ಸಮಯ, ಹಣ ಉಳಿಸಿ ಪರಸ್ಪರ ಒಬ್ಬರಿಗೊಬ್ಬರು ಸಹಬಾಳ್ವೆಯಿಂದ ಉಳಿಯಲು ಸಾಧ್ಯವೆಂದು ಸ್ಥಳೀಯ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎಚ್.ಎ. ತಿಳಿ ಹೇಳಿದರು.
ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಡಿ ಏರ್ಪಡಿಸಲಾಗಿದ್ದ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಧೀಶ ಬಸವರಾಜ ಸನದಿ ಮಾತನಾಡಿ ನ್ಯಾಯಾಲಯದಲ್ಲಿ ಉಭಯ ಕಕ್ಷಿದಾರರು ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಮುಂದಾದರೆ ಪ್ರತಿ ದಿನವೂ ಸಹ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗವುದು. ಆ ನಿಟ್ಟಿನಲ್ಲಿ ಕಕ್ಷಿದಾರರು ಹಾಗೂ ವಕೀಲರು ಪ್ರಕರಣ ಇತ್ಯರ್ಥಗೊಳಿಸಲು ಸಹಕಾರಿಯಾಗಬೇಕು. ಕಾನೂನು ಸಾಕ್ಷರತೆಯಿಂದಾಗಿ ಜನಸಾಮಾನ್ಯರು ಸಂವಿಧಾನ ಹಾಗೂ ಇತರ ಶಾಸನಗಳು ತಮಗೆ ಕೊಡ ಮಾಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂದರು.
ಸ್ಥಳೀಯ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾಖಲಾದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್.ಎ. ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ ಪಡಿಸಿದರು.

ನಂತರ ನಡೆದ ಲೋಕ ಅದಾಲತ್ ನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಸಿವಿಲ್ ಸ್ವರೂಪದ 8 ವ್ಯಾಜ್ಯಗಳನ್ನು ಹಾಗು ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಕ್ರಿಮಿನಲ್ 14, ಸಿವಿಲ್ 3 ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಸಂಧಾನೇತರಕಾರರಾಗಿ ವಕೀಲ ಎಸ್.ಎಲ್.ಸೋಮಣ್ಣವರ ಕಾರ್ಯನಿರ್ವಹಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಅಜಿತ ಜನಗೌಡಾ ಹಾಗೂ ಸ್ಥಳೀಯ ವಕೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

loading...