ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದರೆ ಕಠಿಣ ಕ್ರಮ: ಮಾಣ್ಯಿಗೋರ್

0
30
loading...

ಚಿಕ್ಕೋಡಿ 04: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‍ನಲ್ಲಿ ಶಿಸ್ತು ಪ್ರಾಮುಖ್ಯತೆ ಇದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಹೇಳಿಕೆಗಳನ್ನು ಯಾರೇ ನೀಡಿದರೂ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಾಣಿಕಂ ಟ್ಯಾಗೋರ ಹೇಳಿದರು.

ಪಟ್ಟಣದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಕಾಂಗ್ರೆಸ್‍ನಲ್ಲಿಯೇ ಇದ್ದಾರೆ ಈ ಬಗ್ಗೆ ಗೊಂದಲದ ಹೇಳಿಕೆ ನೀಡಿದವರ ವಿರುದ್ಧ ಸೂಕ್ತ ಕ್ರಮ ಜರಿಗಿಸಲಾಗುವುದು. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಿ ವರಿಷ್ಠರು ಟಿಕೆಟ್ ನೀಡುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕೆಂದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಕಾಂಗ್ರೆಸ್ ಸೋಲಿಸಲು ತಂತ್ರ ಹೆಣೆದಿದ್ದು, ಕಾಂಗ್ರೆಸ್ ಸಹ ಇದಕ್ಕೆ ಪ್ರತಿತಂತ್ರ ಹೂಡುವ ಸಲುವಾಗಿ ಕೊನೆಯ ಕ್ಷಣದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲಿದ್ದು, ಇತ್ತೀಚಿಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಕರ್ನಾಟಕದಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೇರಲಿದೆ ಎಂದರು.

12 ಸ್ಥಾನ ಗೆಲ್ಲುವ ಗುರಿ:
ಬೆಳಗಾವಿ ಜಿಲ್ಲೆಯ 18 ಸ್ಥಾನಗಳಲ್ಲಿ 12 ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗಿದ್ದು,

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ ಎಂದರು.
ಬರುವ ಏಪ್ರೀಲ್ 14-15 ರಂದು ಒಂದೆ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ 3 ಅಭ್ಯರ್ಥಿಗಳ ಹೆಸರು ಶಿಫಾರಸ್ಸು ಮಾಡಲಾಗಿದೆ. 3 ರಲ್ಲಿ ಒಬ್ಬರನ್ನು ಅಂತಿಮ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುವುದು. ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ. ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶವಿಲ್ಲ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಒಂದು ವೇಳೆ ಯಾರಾದರೂ ಹೊಂದಾಣಿಕೆ ನಡೆಸಿದರೆ ಅಂಥವರ ವಿರುದ್ಧ ಪಕ್ಷ ಶಿಸ್ತು ಕ್ರಮ ಜರುಗಿಸಲಿದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ಅಚ್ಚೆದಿನ ಬರಲೆಇಲ್ಲ. ಜನರ ಬ್ಯಾಂಕ ಖಾತೆಗಳಿಗೆ 15 ಲಕ್ಷ ಜಮೆಯಾಗಲಿಲ್ಲ. ಬಿಜೆಪಿ ಸರ್ಕಾರ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇದರಿಂದ ಜನತೆ ಬೆಸತ್ತು ಮತ್ತೆ ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ ಗಾಂದಿಯವರು ರಾಜ್ಯದಲ್ಲಿ 82 ಕ್ಷೇತ್ರದಲ್ಲಿ ತಮ್ಮ ಯಾತ್ರೆ ನಡೆಸಿದ್ದು, ಈ ಯಾತ್ರೆಯಲ್ಲಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ.

ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಝಾಕೀರ ಸನದಿ, ರಾಯಬಾಗ ಬ್ಲಾಕ್ ಪಿ.ಐ.ಕೋರೆ, ಅಧ್ಯಕ್ಷ ಈರಗೌಡ ಪಾಟೀಲ, ಎಚ್.ಎಸ್.ನಸಲಾಪೂರೆ, ಅನೀಲ ಸುಣದೋಳಿ, ಪಿ.ಐ.ಕೋರೆ, ಪಂಕಜ ಪಾಟೀಲ, ಎಂ.ಎಚ್.ಪಟೇಲ್, ರಾಜು ಪವಾರ, ಗಣೇಶ ಮೋಹಿತೆ, ಮುಂತಾದವರು ಉಪಸ್ಥಿತರಿದ್ದರು.

loading...