ಪ್ರಚಾರಕ್ಕೂ ಮುನ್ನ ಅನುಮತಿ ಪಡೆಯುವುದು ಕಡ್ಡಾಯ: ಶೆಟ್ಟಿ

0
24
loading...

ವಿಜಯಪುರ: ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಮುನ್ನ ಜಿಲ್ಲಾ ಮಾಧ್ಯಮ ದೃಢೀಕರಣ ಹಾಗೂ ಕಣ್ಗಾವಲು ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಮಾಧ್ಯಮ ಕಣ್ಗಾವಲು ಕೋಶದ ಅಧ್ಯಕ್ಷ ಹಾಗೂ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮುದ್ರಣ ಮಾಧ್ಯಮಗಳ ಕಾರ್ಯನಿರ್ವಾಹಕರು ಹಾಗೂ ಸ್ಥಳೀಯ ಪತ್ರಿಕೆಗಳ ಸಂಪಾದಕರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳುವ ಮುಂಚೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮುದ್ರಣ ಮಾಧ್ಯಮಕ್ಕೆ ಸಂಬಂಧಪಟ್ಟಂತೆ ಜಾಹೀರಾತು ನೀಡುವ ಮುಂಚೆ ಆಯಾ ಪಕ್ಷಗಳ ಪ್ರತಿನಿಧಿಗಳಾಗಿದ್ದಲ್ಲಿ ಸಂಬಂಧಪಟ್ಟ ಪಕ್ಷದ ಅಭ್ಯರ್ಥಿಯ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪಕ್ಷದ ಅಭ್ಯರ್ಥಿಯ ಮಾಹಿತಿ ಇಲ್ಲದೇ ಜಾಹೀರಾತು ನೀಡಿದ್ದಲ್ಲಿ 171(ಎಚ್‌) ಐಪಿಸಿ ಕಾಯ್ದೆಯಡಿ ನೋಟಿಸ್‌ ಜೊತೆಗೆ ಮುದ್ರಕರ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳಲು ಅವಕಾಶವಿದ್ದು, 2000 ರೂ.ಗಳ ದಂಡ, 2 ವರ್ಷ ಜೈಲು ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಹೇಳಿದರು.
ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜಾಹೀರಾತು ನೀಡಬೇಕಾದಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಂತೆ ಜಾಹೀರಾತು ವಿಷಯವನ್ನು ಮೂರು ದಿನಗಳ ಮುಂಚಿತವಾಗಿ ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ ಮಾಧ್ಯಮ ದೃಢೀಕರಣ ಹಾಗೂ ಕಣ್ಗಾವಲು ಸಮಿತಿಗೆ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ರಾಜಕೀಯ ಪಕ್ಷ ಹೊರತುಪಡಿಸಿ ಇತರರು ಜಾಹೀರಾತು ನೀಡಬಯಸಿದ್ದಲ್ಲಿ 7 ದಿನ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅದರಂತೆ ಜಾಹೀರಾತಿಗಾಗಿ ನಿಗದಿತ ನಮೂನೆಯ ಅರ್ಜಿಯೊಂದಿಗೆ ಜಾಹೀರಾತಿನ ವಿಷಯವನ್ನೊಳಗೊಂಡ ಸಿಡಿ ರೂಪದಲ್ಲಿ ಅಥವಾ ಇತರೆ ಅವಶ್ಯಕ ದಾಖಲೆ ರೂಪದಲ್ಲಿ ಸಲ್ಲಿಸಬೇಕು. ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಸಮಿತಿಯು ಅನುಮತಿ ನೀಡಲಿದೆ ಎಂದು ಹೇಳಿದರು.
ಒಟ್ಟಾರೆ ವಿವಿಧ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಟಕವಾಗುವ ಜಾಹೀರಾತುಗಳ ವೆಚ್ಚವನ್ನು ಆಯಾ ಅಕೌಂಟಿಂಗ್‌ ತಂಡ, ಎಕ್ಸಪೆಂಡಿಚರ್‌ ಆಬ್ಜರ್ವರ್‌ ತಂಡದ ಮೂಲಕ ಆಯಾ ಅಭ್ಯರ್ಥಿಗಳ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದೆಂದ ಅವರು, ಬರುವ ಚುನಾವಣೆಗಾಗಿ ಪ್ರತಿ ಅಭ್ಯರ್ಥಿಗೆ 28 ಲಕ್ಷ ರೂ.ಗಳ ವೆಚ್ಚವನ್ನು ಚುನಾವಣಾ ಆಯೋಗ ನಿಗದಿಪಡಿಸಿದೆ ಎಂದು ಹೇಳಿದರು.
ಮುದ್ರಣ ಹಾಗೂ ವಿದ್ಯುನ್ಮಾನ್‌ ಮಾಧ್ಯಮದಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಕಾಸಿಗಾಗಿ ಸುದ್ದಿ ಪ್ರಕಟಿಸದಂತೆ ಅವರು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌, ವ್ಯಾಟ್ಸ್‌ಪ್‌ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಹಿತಿಯನ್ನು ಪೋಸ್ಟ್‌ ಮಾಡಿದ್ದಲ್ಲಿ ಸಂಬಂಧಪಟ್ಟ ಅಡ್ಮಿನ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕಾರಣ, ಸಾಮಾಜಿಕ ತಾಣಗಳ ಮೂಲಕ ಯಾವುದೇ ರೀತಿಯ ಪ್ರಚಾರ ಕೈಗೊಳ್ಳುವ ಮುಂಚೆ ಜಿಲ್ಲಾಧಿಕಾರಿಗಳ ಸಮಕ್ಷಮ ಘೋಷಣಾ ಪತ್ರ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ. ಇಂತಹ ಜಾಲತಾಣಗಳ ಮೇಲೆ ತಂಡದ ಮೂಲಕ ನಿಗಾ ಸಹ ಇಡಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.

loading...