ಪ್ರಸಕ್ತ ವರ್ಷ ಗೇರು ಉತ್ತಮವಾಗಿದೆ

0
25
loading...

ಕನ್ನಡಮ್ಮ ಸುದ್ದಿ-ಶಿರಸಿ: ಪ್ರಸಕ್ತ ವರ್ಷ ಗೇರು ಇಳುವರಿ ಉತ್ತಮವಾಗಿ ಬಂದಿರುವ ಜೊತೆಗೆ ಮಾರುಕಟ್ಟೆಯಲ್ಲಿ ಹಂಗಾಮಿನ ಆರಂಭದಲ್ಲಿಯೇ ಕೆಜಿ ಗೇರುಬೀಜಕ್ಕೆ ಸರಾಸರಿ 130 ರೂಪಾಯಿ ದರ ಲಭ್ಯವಾಗುತ್ತಿದೆ. ಗೇರು ಬೀಜದ ಬೇಡಿಕೆ ಸಾಕಷ್ಟಿದ್ದು ಮುಂದಿನ ದಿನದಲ್ಲಿ ಮಾರುಕಟ್ಟೆ ಧಾರಣೆಯಲ್ಲಿ ಇನ್ನಷ್ಟು ಏರಿಕೆಯಾಗಬಹುದೆಂಬ ನಿರೀಕ್ಷೆಯಲ್ಲಿ ಗೇರು ಬೆಳೆಗಾರರಿದ್ದಾರೆ.

ಕಳೆದ ಸಾಲಿನಲ್ಲಿ ಮಳೆ ಹಾಗೂ ವಾತಾವರಣದಲ್ಲಿ ತೇಂವಾಂಶ ಕೊರತೆ, ತಾಪಮಾನ ವೈಪರಿತ್ಯದ ಪರಿಣಾಮ ಗೇರು ಬೆಳೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ಇಳುವರಿ ಕುಂಠಿತದ ಜೊತೆಗೆ ದರದಲ್ಲಿಯೂ ಇಳಿಕೆಯಾಗಿತ್ತು. ಇದರಿಂದ ಗೇರು ಕೃಷಿಕ ಕೃಷಿಯೆಡೆಗೆ ನಿರಾಸಕ್ತಿ ತಳೆಯುವಂತಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಗೇರು ಇಳುವರಿ ರೈತರ ಕೈ ಹಿಡಿದಿದೆ. ಜೊತೆಗೆ, ಗೇರು ಬೀಜಕ್ಕೆ ಹಂಗಾಮಿನ ಆರಂಭದಲ್ಲಿಯೇ ಉತ್ತಮ ದರ ಲಭಿಸುತ್ತಿದೆ. ಉತ್ತಮ ತಳಿಯ ಗೇರು ಬೀಜಕ್ಕೆ ಖಾಸಗಿಯಲ್ಲಿ 160ರಿಂದ 170 ರೂ.ಗಳು ಸಿಗುತ್ತಿದ್ದು ಗೇರು ಬೆಳೆಗಾರರಿಗೆ ಆಶಾ ಭಾವನೆ ಮೂಡಿದೆ.
ಈ ಬಾರಿ ಹವಾಮಾನ ವೈಪರೀತ್ಯದಿಂದ ಗೇರಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಳೆದ ವರ್ಷ ಗೇರು ಬೀಜಕ್ಕೆ ಹಂಗಾಮಿನಲ್ಲಿ ಕೇಜಿಯೊಂದಕ್ಕೆ 100 ರಿಂದ 110 ರೂಪಾಯಿ ಮಾರುಕಟ್ಟೆ ಧಾರಣೆ ಇತ್ತು. ಈ ಬಾರಿ ಗೇರು ಬೆಳೆಯೂ ಉತ್ತಮವಾಗಿದೆ. ಜೊತೆಗೆ ಗೇರು ಬೀಜಕ್ಕೆ ಬಹಳ ಬೇಡಿಕೆಯಿದ್ದು ಕೇಜಿಯೊಂದಕ್ಕೆ ಸರಾಸರಿ 130 ರೂಪಾಯಿಯಷ್ಟು ಮಾರುಕಟ್ಟೆ ಧಾರಣೆ ಲಭ್ಯವಾಗುತ್ತಿದೆ. ವೆಂಗುರ್ಲಾ 7ನಂಥ ಉತ್ತಮ ತಳಿಯ ಬೀಜಗಳಿಗೆ 160 ರೂ.ಗಳೂ ಲಭ್ಯವಾಗುತ್ತಿವೆ. ಈ ದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಗೇರು ವ್ಯಾಪಾರಸ್ಥ ಎಚ್. ಗಣೇಶ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ಗೇರು ಕೃಷಿಕರು ನಷ್ಟ ಅನುಭವಿಸಿದ್ದೆವು. ಈ ಬಾರಿ ಉತ್ತಮ ಇಳುವರಿ ಜೊತೆಗೆ ಉತ್ತಮ ದರವೂ ಲಭಿಸುತ್ತಿದೆ. ಇದರಿಂದ ಅಲ್ಪ ಸ್ವಲ್ಪ ಗೇರು ತೋಟವಿದ್ದ ರೈತರೂ ಗೇರು ಉತ್ಪನ್ನ ಸಂಗ್ರಹಿಸಲು ಉತ್ಸುಕತೆ ತೋರುತ್ತಿದ್ದಾರೆ ಎನ್ನುತ್ತಾರೆ ಗೇರು ಬೆಳೆಗಾರ ಕೃಷ್ಣಮೂರ್ತಿ ಹೆಗಡೆ.

loading...