ಬರಗಾಲಕ್ಕೆ ತುತ್ತಾಗುತ್ತಿರುವ ಪ್ರಾಣಿಗಳು

0
21
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಒಣಗಿ ನಿಂತಿರುವ ಮರಗಿಡಗಳು, ಬಿರುಕು ಬಿಟ್ಟಿರುವ ಜಲಮೂಲಗಳು, ಬೋಳುಬೋಳಾಗಿ ಕಾಣುತ್ತಿರುವ ಗುಡ್ಡಬೆಟ್ಟಗಳು, ಆಹಾರ ಹಾಗೂ ನೀರು ಅರಸುತ್ತ ನಾಡಿನತ್ತ ಮುಖ ಮಾಡುತ್ತಿರುವ ಕಾಡುಪ್ರಾಣಿಗಳು, ಬಾಯಾರಿಕೆ ಇಂಗಿಸಿಕೊಳ್ಳಲು ಬಂದು, ಅಪಘಾತಗಳಿಗೆ ಬಲಿಯಾಗುತ್ತಿರುವ ಮೂಕ ಪ್ರಾಣಿಗಳು, ತಾಂಡವಾಡುತ್ತಿರುವ ಬರಗಾಲದಲ್ಲಿ ಕಾಡುಪ್ರಾಣಿ, ಪಕ್ಷಿಗಳಿಗೆ ಜಲಮೂಲಗಳನ್ನು ಪುನಶ್ಚೇತನ ಮಾಡುವ ಅಗತ್ಯತೆ ಎದ್ದು ಕಾಣುತ್ತಿದೆ.
ಒಂದೆಡೆ ನೀರಿನ ಕೊರತೆ, ಮತ್ತೊಂದೆಡೆ ಆಹಾರದ ಸಮಸ್ಯೆಯಿಂದ ತೊಂದರೆಯಾಗಿ, ಎರಡನ್ನೂ ಹುಡುಕುತ್ತ ಪ್ರಾಣಿ, ಪಕ್ಷಿಗಳು, ನಾಡಿನತ್ತ ಸಂಚರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ತಾಲೂಕಿನ ಸನವಳ್ಳಿ, ಬಾಚಣಕಿ, ಜಲಾಶಯ, ಚವಡಳ್ಳಿ, ಇಂದೂರ, ಮೈನಳ್ಳಿ, ಹುಲಿಹೊಂಡ, ನಾಗನೂರ, ಬೆಡಸಗಾಂವ, ಮುಂಡಗೋಡ ಪಟ್ಟಣದ ಹೋರವಲಯದ ಕೆಂಪಟ್ಟಿ ಏರಿ ಸೇರಿದಂತೆ ಇನ್ನಿತರ ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ, ನವಿಲು, ಸೇರಿದಂತೆ ಪ್ರಾಣಿ, ಪಕ್ಷಿಗಳು ನೀರಿಗಾಗಿಮನೆಯ ಹಿತ್ತಲಿನವರೆಗೆ, ರಾಜ್ಯ ಹೆದ್ದಾರಿ ಸನಿಹ ಇಲ್ಲವೇ ಜನವಸತಿ ಪ್ರದೇಶದ ಅನತಿ ದೂರದವರೆಗೆ ಬಂದು ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂಧರ್ಭಗಳಲ್ಲಿ ನಾಯಿಗಳು ಬೆನ್ನಟ್ಟಿ ಗಾಯಗೊಳಿಸುವುದು, ರಸ್ತೆ ದಾಟುವಾಗ ಅಪಘಾತವಾಗುವುದು, ಇಲ್ಲವೇ ಬೇಟೆಗಾರರಿಗೆ ಬಲಿಯಾಗುವ ಪ್ರಕರಣಗಳು ನಡೆದಿರುವ ನಿಧರ್ಶನಗಳಿವೆ.

ಪರಿಸರ ಪ್ರೇಮಿ ವಿ.ಎ.ಅಂಗಡಿ ಹೇಳಿಕೆ-ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಅರಣ್ಯ ಪ್ರದೇಶದಲ್ಲಿನ ಕೆರೆ. ಹೊಂಡಗಳು ನೀರು ತುಂಬದೆ. ಬೆಸಿಗೆಯ ಸಮಯದಲ್ಲಿ ನೀರು ಕಾಲಿಯಾಗಿ ಪ್ರಾಣಿ, ಪಕ್ಷಿಗಳು ತೊಂದರೆ ಅನುಭವಿಸುತ್ತಿರುವುದಲ್ಲದೆ. ಆಹಾರ ಮತ್ತು ನೀರು ಅರಸಿ ನಾಡಿನತ್ತ ಬಂದು ಜೀವ ಕಳೆದುಕೊಳ್ಳುತ್ತಿವೆ. ಹಾಗಾಗಿ ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳು ತಿನ್ನುವಂತಹ ಹಣ್ಣುಗಳ ಗಿಡಗಳನ್ನು ಬೆಳಸಬೇಕು, ಹಾಗೂ ನೀರು ಸಂಗ್ರಕ್ಕಾಗಿ ಪ್ರಾಣಿಗಳಿಗೆ ತೊಂದರೆ ಆಗದಿರುವಂತಹ ಹೊಂಡಗಳನ್ನು ನಿರ್ಮಿಸಿ ಬೆಸಿಗೆಯ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಹಾಕಿಸುವ ವ್ಯವಸ್ಥೆ ಮಾಡಿದಾಗ ಆಹಾರ, ನೀರಿಗಾಗಿ ಪ್ರಾಣಿ, ಪಕ್ಷಿಗಳು ನಾಡಿನತ್ತ ಬಂದು ಜೀವ ಕಳೆದುಕೊಳ್ಳುವುದು ತಪ್ಪುತ್ತದೆ ಎಂದು ಹೇಳುತ್ತಾರೆ.

loading...