ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ: ಉಮಾಕಾಂತ

0
13
loading...

ಕಾರವಾರ: ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದ್ದು, ಪಕ್ಷದ ತತ್ವ, ಸಿದ್ಧಾಂತದ ಗಂಧ ಗಾಳಿ ಗೊತ್ತಿಲ್ಲದವರು ಮೆರೆಯುತ್ತಿದ್ದಾರೆ. ಇತ್ತೀಚೆಗೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಮನ ನೊಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಸತೀಶ್‌ ಸೈಲ್‌ ಅವರ ಕೈ ಬಲಪಡಿಸಲು ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಉಮಾಕಾಂತ್‌ ಹರಿಕಂತ್ರ ಹೇಳಿದರು.
ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಬಾಲ್ಯದಿಂದಲೇ ಸಂಘ ಪರಿವಾದಲ್ಲಿ ಕೆಲಸ ಮಾಡಿದವನು. ಬಿಜೆಪಿ ಧ್ವಜ ಹಿಡಿಯಲು ಯಾರೂ ಇಲ್ಲದ ಕಾಲದಲ್ಲಿ ಮುದಗಾ, ಅಮದಳ್ಳಿ, ಬಿಣಗಾ, ಅರ್ಗಾ, ಚೆಂಡಿಯಾ, ಸಂಕ್ರುಬಾಗ್‌ ಮುಂತಾದ ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಕಾರವಾರ ತಾಲೂಕಿನ ಕರಾವಳಿ ಭಾಗದಲ್ಲಿ ಜನಸಂಘದ ಕಾಲದಿಂದಲೂ ಮೀನುಗಾರರು ಬಿಜೆಪಿಯನ್ನು ಕೈ ಹಿಡಿದು ಬೆಳೆಸಿದ್ದಾರೆ. ಪಕ್ಷಕ್ಕಾಗಿ ಅನೇಕ ಮೀನುಗಾರರು ವಿವಿಧ ಹೋರಾಟಗಳಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದಾರೆ. ಅವರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಅನೇಕ ಹಿರಿಯರು ಪಕ್ಷ ಅಧಿಕಾರಕ್ಕೆ ಬರುವ ಕನಸು ಕಂಡು, ಅದು ಸಾಕಾರವಾಗುವ ಮುಂಚೆನೇ ಇಹಲೋಕ ತ್ಯಜಿಸಿದ್ದಾರೆ. ಪಕ್ಷಕ್ಕೋಸ್ಕರ ವೈಯಕ್ತಿಕ ನೆಲೆಯಲ್ಲಿ ಉದ್ಯೋಗ, ಸಂಸಾರ ತ್ಯಾಗ ಮಾಡಿದ ಅನೇಕ ಮಹನೀಯರು ಸದ್ಯ ಮೂಲೆ ಗುಂಪಾಗಿದ್ದಾರೆ. ಅವರನ್ನು ಸೌಜನ್ಯಕ್ಕಾದರೂ ಭೇಟಿ ಮಾಡಿ ಮಾತನಾಡಿಸುವವರಿಲ್ಲ ಎಂದರು.
. ಅದರಂತೆ ಮೀನುಗಾರ ಮುಖಂಡರಲ್ಲಿ ಯೋಗ್ಯರಾದ ಪ್ರಸಾದ ಕಾರವಾರಕರ, ಗಣಪತಿ ಉಳ್ವೇಕರ, ಪಿ.ಎಂ.ತಾಂಡೇಲ್‌, ರಾಜು ತಾಂಡೇಲ್‌ ಅವರಿಗೆ ಟಿಕೇಟ್‌ ನೀಡ ಬಹುದಾಗಿತ್ತು. ಆದರೆ ಪಕ್ಷದ ವಿರುದ್ಧ ಕೆಲಸ ಮಾಡಿದ ರೂಪಾಲಿ ನಾಯ್ಕ ಅವರಿಗೆ ಟಿಕೇಟ್‌ ನೀಡಿದ್ದು ತಪ್ಪು ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಳೆದ ಬಾರಿ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಪಕ್ಷದ ಸೋಲಿಗೆ ಕಾರಣಳಾಗಿದ್ದಳು. ಅಂತಹವಳು ಈಗ ಬಿಜೆಪಿ ಎಂಎಲ್‌ಎ ಅಭ್ಯರ್ಥಿಯಾಗಿರುವುದು ಹಾಸ್ಯಾಸ್ಪದವಾಗಿದೆ. ಪಕ್ಷದ ನಾಯಕರಲ್ಲಿನ ಅಧಿಕಾರ ಹಪಾಹಪಿ, ಹಣದ ದುರಾಸೆ ಕಂಡು ಬೇಸತ್ತು ಹೋಗಿದ್ದೇವೆ. ಆರ್‌ಎಸ್‌ಎಸ್‌, ವಿಶ್ವಹಿಂದೂ ಪರಿಷತ್‌, ಬಿಜೆಪಿ ಹೀಗೆ ಪರಿವಾರದಲ್ಲಿ ಕಳೆದ 30 ವರ್ಷಗಳಿಂದ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿದ ನಮಗೆ ಈಗ ಭ್ರಮ ನಿರಸನವಾಗಿದ್ದು, ಪಕ್ಷ ಬಿಡಲು ಕಾರಣವಾಗಿದೆ. ಪಕ್ಷದ ನಾಯಕರ ವಿರುದ್ಧ ಪ್ರತಿಭಟಿಸಿ ಈ ಭಾಗದ ಸಾವಿರಾರು ಹಳೆ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಲಿದ್ದೇವೆ. ಅಲ್ಲದೇ ಹಾಲಿ ಶಾಸಕ ಸತೀಶ್‌ ಸೈಲ್‌ ಅವರು ನಮ್ಮ ಭಾಗದಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಯಾವ ಪ್ರಲೋಭನೆಗೂ ಒಳಗಾಗದೇ ಅವರನ್ನು ಬೆಂಬಲಿಸಿ ಸಾಮೂಹಿಕವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ವಿದ್ಯಾಧರ್‌ ದುರ್ಗೇಕರ, ಜಗದೀಪ್‌ ಗೋವೇಕರ, ಗಣಪತಿ ತಾಂಡೇಲ್‌, ವಿಕ್ರಂ ಹರಿಕಂತ್ರ ಮುಂತಾದವರು ಉಪಸ್ಥಿತರಿದ್ದರು.

loading...