ಬಿಜೆಪಿಯಿಂದ ಮರಾಠರಿಗೆ ಅನ್ಯಾಯ ಆರೋಪ

0
14
loading...

ಹಳಿಯಾಳ: ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮರಾಠಾ ಸಮುದಾಯದ ವ್ಯಕ್ತಿಗೆ ಟಿಕೇಟ್ ನೀಡುವುದಾಗಿ ಭರವಸೆ ನೀಡಿ ನಂತರ ಕೈಕೊಟ್ಟಿರುವ ಭಾಜಪದಿಂದ ಮರಾಠರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಟಿಕೇಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಎಸ್ಪಿ ಜಿ.ಆರ್. ಪಾಟೀಲ ತಾನು ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಹಳಿಯಾಳದ ಮರಾಠಾ ಭವನದಲ್ಲಿ ಮಂಗಳವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಜಿ.ಆರ್. ಪಾಟೀಲ, ಇನ್ನೋರ್ವ ಆಕಾಂಕ್ಷಿಯಾಗಿದ್ದ ಎಲ್.ಎಸ್. ಅರಸಿನಗೇರಿ, ಮುಖಂಡರಾದ ಎಸ್.ಕೆ. ಗೌಡಾ, ದಾಂಡೇಲಿಯ ವಿಠ್ಠಲ ಬೈಲೂರಕರ ಮಾತನಾಡುತ್ತಾ ಬಿಜೆಪಿ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸ್ಥಳೀಯ ಕ್ಷೇತ್ರದ ಮೂರೂ ಅಧ್ಯಕ್ಷರುಗಳು ಇವರ ವಿರುದ್ಧ ಟೀಕಾಪ್ರಹಾರಗೈದರು.

ಮರಾಠಾ ಕ್ರಾಂತಿ ಮೋರ್ಚಾದ ವತಿಯಿಂದ ನಡೆಸಲಾದ ಬೃಹತ್ ಶಕ್ತಿ ಪ್ರದರ್ಶನದಿಂದಾಗಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮರಾಠರಲ್ಲಿ ಈ ಬಾರಿ ತಮ್ಮ ಸಮುದಾಯದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ರಾಜಕೀಯ ಪ್ರಜ್ಞೆ ಜಾಗೃತಗೊಂಡಿತ್ತು. ಬಿಜೆಪಿಯೇ ಸೂಕ್ತ ಪಕ್ಷ ಎಂಬ ವಿಶ್ವಾಸದಿಂದ ಆ ಪಕ್ಷಕ್ಕೆ ಸೇರ್ಪಡೆಗೊಂಡ ತನಗೆ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಖಚಿತ ಭರವಸೆ ನೀಡಿದ್ದರು ಎಂದ ಜಿ.ಆರ್. ಪಾಟೀಲ ಪಕ್ಷದ ಸೂತ್ರಗಳನ್ನು ಗಾಳಿಗೆ ತೂರಿ ಮಾಜಿ ಶಾಸಕ ಸುನೀಲ ಹೆಗಡೆಯವರಿಗೆ ಟಿಕೇಟ್ ನೀಡುವಂತೆ ಮಾಡಲಾಗಿದ್ದು ದುರ್ದೈವದ ಸಂಗತಿಯಾಗಿದೆ. ಪಕ್ಷದ ಕ್ಷೇತ್ರದ ಮೂವರು ಅಧ್ಯಕ್ಷರುಗಳು ತಾವು ಪಕ್ಷ ನಿಷ್ಠೆಗಿಂತ ಸುನೀಲ ಹೆಗಡೆ ವ್ಯಕ್ತಿ ನಿಷ್ಠೆ ತೋರಿಸಿದ್ದಾರೆ ಎಂದು ಕಿಡಿಕಾರಿದರು.
ಇನ್ನೋರ್ವ ಟಿಕೇಟ್ ವಂಚಿತರಾದ ವಕೀಲ ಹಾಗೂ ಮಾಜಿ ತಾಲೂಕಾಧ್ಯಕ್ಷ ಎಲ್.ಎಸ್. ಅರಸಿನಗೇರಿ ಮಾತನಾಡುತ್ತಾ ಬಿಜೆಪಿಯು ಮರಾಠಾ ನಾಯಕರಿಗೆ ಶಾಸಕ ಅಭ್ಯರ್ಥಿಯಾಗಲು ಅವಕಾಶ ನೀಡುವುದಿಲ್ಲ. ಬದಲಿದೆ ಅವರಿಗೆ ಮರಾಠರು ಸೈನಿಕರಾಗಿ ಮಾತ್ರ ಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಲಕೃಷ್ಣ ಢೇಪಿ, ಜಿ.ಆರ್. ಪಾಟೀಲ ಪುತ್ರಿ ಲೀನಾ, ಶಾಂತಾರಾಮ ಸೂರ್ಯವಂಶಿ, ರಾಘು ನಾಯ್ಕ, ಅಪ್ಪಾರಾವ್ ಲೊಂಡಿ, ರಾಮಚಂದ್ರ ಗೌಡಾ, ದಾಂಡೇಲಿಯ ಚಂದ್ರಕಾಂತ ಇಂಗೋಲೆ, ಅಶೋಕ ಶರಣೋಬತ್, ಭರಮಣ್ಣಾ ರಾವುತ್ ಮೊದಲಾದವರು ಉಪಸ್ಥಿತರಿದ್ದರು.

loading...