ಬಿಜೆಪಿ ಅಧಿಕಾರಕ್ಕೆ ಬರಲು ಪ್ರತಿಯೊಬ್ಬ ಕಾರ್ಯಕರ್ತರು ಪಣ ತೊಡಬೇಕು : ಹೆಗಡೆ

0
21
loading...

ಖಾನಾಪುರ: ಬಿಜೆಪಿ ಹಿಂದುತ್ವವಾದಿ, ಸಂಘಟಿತ ಮತ್ತು ಪಕ್ಷನಿಷ್ಠ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಪಕ್ಷವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು.
ತಾಲೂಕಿನ ಬೀಡಿ ಗ್ರಾಮದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ವಿಠ್ಠಲ ಹಲಗೇಕರ ಅವರ ಪರಪ್ರಚಾರ ಕೈಗೊಂಡು ಮಾತನಾಡಿದರು.
ಈಗಾಗಲೇ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಮ್ಮನಗಲಿದ ಪ್ರಹ್ಲಾದ ರೇಮಾಣಿ ಅವರು ಒಂದು ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಜನಪರ ಆಡಳಿತವನ್ನು ನೀಡಿದ್ದಾರೆ. ಕ್ಷೇತ್ರ ಈ ಹಿಂದೆ ಕಂಡರಿಯದ ಅಭಿವೃದ್ಧಿಯನ್ನು ಮಾಡಿದ್ದಾರೆ. ಆದರೆ ಕಳೆದ 2013ರಲ್ಲಿ ಪಕ್ಷದ ಆಂತರಿಕ ಕಲಹದಿಂದಾಗಿ ಕ್ಷೇತ್ರವನ್ನು ಎಂಇಎಸ್‌ ಆಕ್ರಮಿಸಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಈಗ ಬಂದಿರುವ ಚುನಾವಣೆಯಲ್ಲಿ ಕಾರ್ಯಕರ್ತರು ಮತ್ತು ಮತದಾರರ ಆಶೀರ್ವಾದದಿಂದ ಈಗ ಮತ್ತೊಂದು ಅವಧಿಗೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂಬ ಪಣವನ್ನು ಪ್ರತಿಯೊಬ್ಬ ಕಾರ್ಯಕರ್ತರು ತೊಡಬೇಕು ಎಂದು ಕರೆ ನೀಡಿದರು.
ಈಗಾಗಲೇ ತಮ್ಮದೇ ಆದ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶ ನೀಡಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಠ್ಠಲ ಹಲಗೇಕರ ಪಕ್ಷದ ಅಧೀಕೃತ ಅಭ್ಯರ್ಥಿಯಾಗಿದ್ದು, ಅವರಿಗೆ ತಮ್ಮ ಬೆಂಬಲವನ್ನು ನೀಡಬೇಕು. ಹಲಗೇಕರ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡುವ ಮೂಲಕ ಓರ್ವ ಸಾಮಾನ್ಯ ಶಿಕ್ಷಕ ತಾಲೂಕಿನ ಪ್ರಥಮ ಪ್ರಜೆ ಮತ್ತು ಜನಪ್ರತಿನಿಧಿಯಾಗುವಂತೆ ಆಶೀರ್ವದಿಸಬೇಕು ಎಂದು ಅವರು ಕೋರಿದರು.
ಇದೇ ಸಂದರ್ಭದಲ್ಲಿ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ಪುತ್ರ ಜ್ಯೋತಿಬಾ ಅವರ ಜೊತೆ ಸಂಧಾನ ಸಭೆ ನಡೆಸಿದ ಸಚಿವರು ಸಭೆಯ ಬಳಿಕ ಜ್ಯೋತಿಬಾ ಕಣದಿಂದ ಹಿಂದೆ ಸರಿದಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯ ಪರ ಬಹಿರಂಗವಾಗಿ ಪ್ರಚಾರ ಮಾಡಲಿದ್ದಾರೆ. ಜ್ಯೋತಿಬಾ ಜೊತೆಗೆ ಅವರ ಬೆಂಬಲಿಗರನ್ನೂ ಪಕ್ಷಕ್ಕೆ ಮರಳಿ ಕರೆತಂದು ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೀಡಿ ಕಾರ್ಯಕ್ರಮದ ಬಳಿಕ ಲಿಂಗನಮಠ ಗ್ರಾಮಕ್ಕೆ ತೆರಳಿದ ಸಚಿವರು ಗ್ರಾಮದಲ್ಲಿ ರೋಡ್‌ ಶೋ ನಡೆಸಿದರು. ನಂತರ ಕಕ್ಕೇರಿಯ ಬಿಷ್ಠಾದೇವಿ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಾವಗಾ, ಗಂದಿಗವಾಡ, ಗುಂಡೇನಟ್ಟಿ ಗ್ರಾಮಗಳಲ್ಲಿ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಹಲಗೇಕರ ಪರ ಪ್ರಚಾರಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ಬ್ಲಾಕ್‌ ಅಧ್ಯಕ್ಷ ವಿಠ್ಠಲ ಪಾಟೀಲ, ಅಭ್ಯರ್ಥಿ ವಿಠ್ಠಲ ಹಲಗೇಕರ, ಜಿಪಂ ಸದಸ್ಯ ಸುರೇಶ ಮ್ಯಾಗೇರಿ, ಮುಖಂಡರಾದ ಸುಭಾಸ ಗುಳಶೆಟ್ಟಿ, ಬಾಬಣ್ಣ ಪಾಟೀಲ, ವಲ್ಲಭ ಗುಣಾಜಿ, ಪ್ರಮೋದ ಕೊಚೇರಿ, ಚೇತನ ಮನೇರಿಕರ, ಬಾಬು ಬಾಳೇಕುಂದ್ರಿ, ಬಸವರಾಜ ಸಾಣಿಕೊಪ್ಪ, ಮಹಾಂತೇಶ ಸಾಣಿಕೊಪ್ಪ, ಅಶೋಕ ಚಲವಾದಿ, ಸುರೇಶ ದೇಸಾಯಿ, ರವಿ ಬನೋಶಿ, ಸದಾನಂದ ಪಾಟೀಲ, ಶಿವಶಂಕರ ಮಡ್ಡಿಮನಿ, ಉಜ್ವಲಾ ಬಸವಣ್ಣಾಚೆ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು. ವಸಂತ ದೇಸಾಯಿ ಸ್ವಾಗತಿಸಿದರು. ಕಿರಣ ಯಳ್ಳೂರಕರ ವಂದಿಸಿದರು.

loading...