ಬಿಜೆಪಿ ಅಭ್ಯರ್ಥಿ ಘೋಷಣೆ-ಪ್ರಚಾರ ಚುರುಕು

0
39
loading...

ಹಾನಗಲ್ಲ: ಜಿಲ್ಲೆಯ ಪ್ರತಿಷ್ಠೆಯ ಕಣವಾಗಿರುವ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಕೆಟ್ ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಮಾಜಿ ಸಚಿವ ಚನ್ನಬಸಪ್ಪ ಎಂ.ಉದಾಸಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಮಾಜಿ ಸಚಿವರ ನಿವಾಸ ಮತ್ತು ಪಕ್ಷದ ಕಚೇರಿಯಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರ ತೊಡಗಿವೆ. ಪಕ್ಷದ ಹಿರಿಯರು, ಕಾರ್ಯಕರ್ತರು ಮಾಜಿ ಸಚಿವರನ್ನು ಅಭಿನಂದಿಸಿದರು.
ಈ ಬಾರಿ ಬಿಜೆಪಿಯಿಂದ ಸಿ.ಎಂ. ಉದಾಸಿ ಅವರಿಗೆ ಟಿಕೆಟ್ ದೊರಕುತ್ತದೆ ಎಂಬ ಬಿಜೆಪಿ ಕಾರ್ಯಕರ್ತರ ಮಾತು ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಪಕ್ಷ ಸಂಘಟನೆಯೊಂದಿಗೆ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಗತ್ಯ ತಂತ್ರಗಳನ್ನು ಸಿ.ಎಂ. ಉದಾಸಿ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರುಗಳು ಹೆಣೆಯ ತೊಡಗಿದ್ದರು.

ನಿರೀಕ್ಷೆಯಂತೆ ಸಿ.ಎಂ. ಉದಾಸಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದರಿಂದ ಟಿಕೆಟ್ ಘೋಷಣೆಯಾದ ಮರುದಿನದಿಂದಲೇ ಉದಾಸಿ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಪ್ರಚಾರ ಅರಂಭಿಸಿದ್ದಾರೆ.
ಹಾನಗಲ್ಲ ವಿಧಾನಸಭಾ ಕ್ಷೇತ್ರದ 239 ಬೂತ್ ಮತ್ತು ಘಟಕಾಧ್ಯಕ್ಷರೊಂದಿಗೆ ನೇರ ಸಂಪರ್ಕದಲ್ಲಿರುವ ಉದಾಸಿ ಈ ಬಾರಿ ಗೆಲುವು ನಮ್ಮದಾಗುವಂತೆ ಯುದ್ದೋನ್ಮಾದಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.

ಪ್ರತಿಯೊಂದು ಬೂತ್‍ಗಳಿಗೆ ತೆರಳಿ ಸಭೆ ನಡೆಸುತ್ತಿರುವ ಉದಾಸಿ ಕೇಂದ್ರ ಸರ್ಕಾರದ ಸಾಧನೆಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿಫಲತೆಯನ್ನು ಮತದಾರರಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿದ್ದಾರೆ.
2013ರ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ ವಿಭಜನೆಯಿಂದಾಗಿ ಕೆಜಿಪಿಯಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಸುಮಾರು 5 ಸಾವಿರ ಮತಗಳ ಅಂತರದಿಂದ ಮಾಜಿ ಸಚಿವ ಮನೋಹರ ತಹಶೀಲ್ದಾರ ಎದುರು ಪರಭಾವಗೊಂಡಿದ್ದರು.

ಸದ್ದಡಗಿದ ಅಪಸ್ವರ: ಚುನಾವಣೆ ಪ್ರಕ್ರಿಯೆ ಗರಿಗೆದರುತ್ತಿದ್ದಂತೆ, ಬಿಜೆಪಿಯಲ್ಲಿ ಸಿ.ಎಂ. ಉದಾಸಿ ವಿರುದ್ಧ ಅಪಸ್ವರಗಳು ಕೇಳಿಬರಲಾರಂಭಿಸಿದ್ದವು. ಪಕ್ಷದ ಇನ್ನೊಂದು ಬಣದವರು, ಯುವ ಕಾರ್ಯಕರ್ತರು ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದಿದ್ದರು. ಉದಾಸಿ ಬೆಂಬಲಿಗರಿಗೆ ಈ ವಿಷಯ ಇರಿಸುಮುರುಸು ಉಂಟುಮಾಡಿತ್ತು. ಆದರೆ, ಪಕ್ಷದ ಹೈಕಮಾಂಡ್ ಸೂಚನೆಯಂತೆ, ಈಗ ಇನ್ನೊಂದು ಬಣದವರ ಸದ್ದು ಅಡಗಿದೆ. ಈ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಬಿಜೆಪಿಗೆ ಬಂಡಾಯದ ಬಿಸಿ: ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಿಜೆಪಿಯ 2013ರ ಅಭ್ಯರ್ಥಿ ಬಸವರಾಜ ಹಾದಿಮನಿ, ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಈಳಿಗೇರ ಹಾಗೂ ಕರ್ನಾಟಕ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಮೂವರು ಆಕಾಂಕ್ಷಿಗಳು ಸಿ.ಎಂ. ಉದಾಸಿ ಅವರ ವಿರುದ್ಧ ಬಂಡಾಯ ಸಾರುವರೋ ಇಲ್ಲವೇ ಪಕ್ಷದ ಅಭ್ಯರ್ಥಿ ಗೆಲುವಿನಲ್ಲಿ ಒಗಟ್ಟಾಗಿ ಹೋರಾಡುವರೋ ಎಂಬುದು ಕ್ಷೇತ್ರದ ಮತದಾರರ ಕುತೂಹಲಕ್ಕೆ ಕಾರಣವಾಗಿದೆ.

ಕೈ ಅಂತಿಮವಿಲ್ಲ: ಕಾಂಗ್ರೆಸ್ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತಿದ್ದು, ಯಾರಿಗೆ ಹೈ ಕಮಾಂಡ್ ಆಶೀರ್ವಾದ ಮಾಡುವರೋ ಕಾದು ನೋಡಬೇಕಾಗಿದೆ. ಕಾಂಗ್ರೆಸ್ ರಾಜಕೀಯ ವಲಯಗಳ ಮಾಹಿತಿ ಪ್ರಕಾರ ಈ ಬಾರಿ ಕಾಂಗ್ರೆಸ್ ಟಿಕೆಟ್ ಹಾಲಿ ಶಾಸಕ ಮನೋಹರ ತಹಶೀಲ್ದಾರ ಅವರಿಗೆ ಸಿಗುವ ಸಾಧ್ಯತೆ ಹೆಚ್ಚು. ನವದೆಹಲಿಯಲ್ಲಿ ನಡೆದ ಸ್ರ್ಕೀನಿಂಗ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಲೆಕ್ಕಕ್ಕಿಲ್ಲ: ಕೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಿದ್ದು, ಪಕ್ಷದ ಆಕಾಂಕ್ಷಿಗಳು ಯಾರೆಂಬುದು ಇನ್ನೂ ತಿಳಿಯುತ್ತಿಲ್ಲ.

loading...