ಬಿಜೆಪಿ ಟಿಕೆಟ್‌ ಕೈತಪ್ಪಿದಕ್ಕೆ ರಾಮು ರಾಯ್ಕರ ಆಕ್ರೋಶ

0
22
loading...

ಕನ್ನಡಮ್ಮ ಸುದ್ದಿ-ಕಾರವಾರ: ಪಕ್ಷಕ್ಕಾಗಿ ದುಡಿಸಿ ಬಳಸಿಕೊಂಡರು ನಂತರ ಬಿಸಾಡಿದರು. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥ ಧೋರಣೆ ತಾಳುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ರಾಯ್ಕರ್‌ ಕಾರವಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಅಸಮಾಧಾನ ಹೊರ ಹಾಕಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಹಿರಿಯರು ಟಿಕೆಟ್‌ ನೀಡುವಾಗ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ, ಪಕ್ಷಕ್ಕಾಗಿ ದುಡಿಯದವರಿಗೆ ಮಣೆಹಾಕಿದ್ದಾರೆ. ನಾನು 2008 ರಿಂದ ಟಿಕೆಟ್‌ ಆಕಾಂಕ್ಷಿ. ಮೊದಲ ಸಲ ಟಿಕೆಟ್‌ ನಾನಾ ಕಾರಣ ನೀಡಿ ತಪ್ಪಿಸಿದರು. 2013ರಲ್ಲಿ ಬಿ ಫಾರಂ ನೀಡಿದ್ದನ್ನು ವಾಪಾಸ್‌ ಪಡೆದು, ಕೊನೆಯ ಘಳಿಗೆಯಲ್ಲಿ ಆನಂದ ಅಸ್ನೋಟಿಕರ್‌ಗೆ ನೀಡಿದರು. ಈ ಸಲ ಟಿಕೆಟ್‌ ನೀಡುವುದಾಗಿ ವರಿಷ್ಠರು ಹೇಳಿದ್ದರು.
ದೈವಜ್ಞ ಸಮಾಜದವರು, ವಿಶ್ವಕರ್ಮ ಸಮಾಜದವರು ನಾಳೆ ಹುಬ್ಬಳ್ಳಿಯಲ್ಲಿ ಸಭೆ ಸೇರಿ ಮುಂದಿನ ನಡೆ ನಿರ್ಧರಿಸಲಿದ್ದೇವೆ. ನಮ್ಮ ಬಲ ಏನೆಂದು ತೋರಿಸುತ್ತೇವೆ ಎಂದರು. ಆದರೆ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲಿ ನಿಷ್ಠೆ ಇದೆ. ಆದರೆ ನಾಯಕರು ನಂಬಿಸಿ ಕೈ ಕೊಟ್ಟರು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಮು ರಾಯ್ಕರ್‌ ನೊಂದುಕೊಂಡರು. ನನ್ನನ್ನು ಕಾರವಾರದಲ್ಲಿ ಕೆಲಸ ಮಾಡಿ ಎಂದು ಪಕ್ಷದ ಹಿರಿಯರು ಕಳಿಸಿದ್ದರು. ಕೆಲಸ ಸಹ ಮಾಡಿದ್ದೇನೆ.
ರೂಪಾಲಿ ನಾಯ್ಕ ಟಿಕೆಟ್‌ ಪಡೆದುಕೊಂಡು ಬಂದಿದ್ದಾರೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಪಕ್ಷದಲ್ಲಿ ಹಿರಿಯ. ಹತ್ತಾರು ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನ ಹಿರಿತನ, ಶ್ರಮವನ್ನು ಬಿಜೆಪಿ ಪಕ್ಷದ ಹಿರಿಯರು ಪರಿಗಣಿಸಲಿಲ್ಲ ಎಂಬುದೇ ಬೇಸರ ಎಂದು ರಾಮು ರಾಯ್ಕರ್‌ ನುಡಿದರು. ಅವರ ಜೊತೆ ವಿನಾಯಕ ಶೇಟ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಪಾವುಸ್ಕರ್‌, ದೈವಜ್ಞ ಸಮಾಜದ ಹಿರಿಯರು ಇದ್ದರು.

loading...