ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವೆ: ವೀರಪ್ರಸಾದ

0
14
loading...

ಗಂಗಾವತಿ: ಬಿಜೆಪಿ ಮುಖಂಡ ಪರಣ್ಣ ಮುನವಳ್ಳಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಅಭಿವೃದ್ದಿಗಾಗಿ 45 ಲ.ರು. ಕ್ರೂಢೀಕರಿಸಿ ಕೊಡುವದಾಗಿ ಭರವಸೆ ನೀಡಿದ್ದರು. ಆದರೆ ಈ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ,ಅಯ್ಯಪ್ಪಸ್ವಾಮಿ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ, ಜಟ್ಟಿ ವೀರಪ್ರಸಾದ ಆರೋಪಿಸಿದ್ದಾರೆ. ಇವರ ನಡೆಯನ್ನು ವಿರೋಧಿಸಿ ತಾವು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವದಾಗಿ ವೀರಪ್ರಸಾದ ಪ್ರಕಟಿಸಿದರು.

ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ನೇರವಾದ ಆರೋಪಗಳನ್ನು ಮಾಡಿದರು. ವಾಗ್ದಾನ ಮಾಡಿರುವ ಹಣದಲ್ಲಿ ಕೇವಲ 3 ಲ.ರು. ಮಾತ್ರ ನೀಡಿದ್ದಾರೆ. ದೇವಸ್ಥಾನ ನಿರ್ಮಾಣ ಮಾಡುವ ಸಂದರ್ಭದಲ್ಲಿ ತಮ್ಮ ಕುಟುಂಬದಿಂದ 80 ಲ.ರು. ನೀಡಿದ್ದೇವೆ. ಸಂಸದರಾಗಿದ್ದ ಶಿವರಾಮೇಗೌಡರು 8 ಲ.ರು. ಅನುದಾನ ನೀಡಿದ್ದರು. ದೇವಸ್ಥಾನ ಕಟ್ಟಡ ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡಿ 5 ವರ್ಷಗಳು ಗತಿಸಿವೆ. ಇದನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.
ಈ ವಿಷಯವನ್ನು ಆರ್‍ಎಸ್‍ಎಸ್, ಹಿಂದೂ ಜಾಗರಣ ವೇದಿಕೆ ಮುಖಂಡರ ಗಮನಕ್ಕೆ ತಂದಿದ್ದೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದರು.

ದೇಣಿಗೆ ಟಿಕೇಟು ನಾಪತ್ತೆ:ದೇವಸ್ಥಾನ ಅಭಿವೃದ್ದಿಗಾಗಿ ಮತ್ತು ನಿರ್ವಹಣೆಗಾಗಿ ಶಾಶ್ವತ ದೇಣಿಗೆ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಿದ್ದೆವು. 11116 ರು. ಮುಖ ಬೆಲೆಯ 500 ಟಿಕೇಟುಗಳನ್ನು ಮುದ್ರಿಸಿ ಸಂಘ ಪರಿವಾರದ ಮುಖಂಡ ದುರ್ಗಾದಾಸ್ ಭಂಡಾರಕರ್ ಮತ್ತು ಪರಣ್ಣ ಮುನವಳ್ಳಿಯವರಿಗೆ ಕೊಟ್ಟಿದ್ದೆ.
ಈ ಇಬ್ಬರು ಇದಕ್ಕೆ ಸಂಬಂಧಿಸಿದ ಹಣವನ್ನು ನೀಡಿಲ್ಲ ಮತ್ತು ಟಿಕೇಟನ್ನು ಸಹ ವಾಪಸ್ಸು ಮಾಡಿಲ್ಲ ಎಂದು ಹೇಳಿದರು.

ಆರಂಭದಲ್ಲಿ ದೇವಸ್ಥಾನ ಅಭಿವೃದ್ದಿ ಸಮಿತಿಯಲ್ಲಿ ಬಹಳಷ್ಟು ಜನ ಬಿಜೆಪಿ ಮುಖಂಡರಿದ್ದರು. ಎಲ್ಲರೂ ರಾಜೀನಾಮೆಯನ್ನು ನೀಡಿ ದೂರ ಸರಿದಿದ್ದಾರೆ. ಪ್ರತಿ ತಿಂಗಳು ದೇವಸ್ಥಾ ನಿರ್ವಹಣ ವೆಚ್ಚ 25 ರಿಂದ 30 ಸಾ.ರು. ಬರುತ್ತದೆ. ಇದನ್ನು ತೂಗಿಸಲು ತಮಗೆ ಆಗುತ್ತಿಲ್ಲ ಎಂದು ತಿಳಿಸಿದರು.
ಬಿಜೆಪಿ ಸಿದ್ದಾಂತಗಳಿಗೆ ಸ್ಪಂದಿಸದೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮುಖಂಡರ ನಿಲುವನ್ನು ವಿರೋಧಿಸಿ ತಾವು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

loading...