ಬಿಜೆಪಿ ಮುಕ್ತ ಹುಕ್ಕೇರಿ ಮತಕ್ಷೇತ್ರ ನಿಶ್ಚಿತ: ಸಚಿವ ಜಾರಕಿಹೊಳಿ

0
100
loading...

ಕನ್ನಡಮ್ಮ ಸುದ್ದಿ- ಹುಕ್ಕೇರಿ: ಹಣ ಮತ್ತು ದರ್ಪದ ರಾಜಕಾರಣ ನಡೆಯುವುದಿಲ್ಲ. ವಿರೋಧಿ ಬಿಜೆಪಿ ಏನೇ ರಣತಂತ್ರ ರೂಪಿಸಿದರೂ ಮತದಾರರಿಗೆ ಎ.ಬಿ.ಪಾಟೀಲ ಆಯ್ಕೆ ಬಿಟ್ಟು ಬೇರೆ ಪರ್ಯಾಯವೇ ಇಲ್ಲ. ಈ ಮೂಲಕ ಕ್ಷೇತ್ರವನ್ನು ಬಿಜೆಪಿ ಮುಕ್ತ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಎ.ಬಿ.ಪಾಟೀಲ ಪರ ಬಿರುಸಿನ ಪ್ರಚಾರ ಪಾದಯಾತ್ರೆ ನಡೆಸಿ, ಮತಯಾಚಿ ಮಾತನಾಡಿದ ಅವರು, ಅಂತಿಮವಾಗಿ ಧರ್ಮಯುತವಾಗಿ ಹೇಳಿದಂತೆ ನಡೆದುಕೊಂಡಿರುವ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿಯ ವಿಧಾನ ಸಭೆ ಚುನಾವಣೆಯು ಧರ್ಮ ಮತ್ತು ಅಧರ್ಮಗಳ ನಡುವಿನ ಹೋರಾಟವಾಗಿದೆ ಎಂದು ಇನ್ನು ಪಕ್ಷದ ನಾಯಕರು ಒಳಗೊಂದು ಹೊರಗೊಂದು ಮಾಡಕೂಡದು. ಹಾಗೇನಾದರೂ ಕಂಡು ಬಂದಲ್ಲಿ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಟ್ರೆಂಡ್‌ ಇರುವಾಗ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮೀತ ಶಾ ಇಲ್ಲಿಗೆ ಬಂದು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು. ಅಧಿಕಾರಕ್ಕೆ ಬರುವ ಮೊದಲು ಪೆಟ್ರೋಲ್‌ ದರ ಕಡಿಮೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಈಗ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದರೂ ಪೆಟ್ರೋಲ್‌ ಬೆಲೆ ಹೆಚ್ಚಾಗುತ್ತಿದೆ. ಮೋದಿಯವರ ವಿಕಾಸ ಮನ್‌ ಕಿ ಬಾತ್‌ಗೆ ಮಾತ್ರ ಸೀಮಿತವಾಗಿದೆ. ಆದರೆ, ವಾಸ್ತವದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಕೋಮು ಭಾವನೆ ಕದಡಿ ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳು ಮಾಡುವುದಷ್ಟೇ ಗೊತ್ತಿದೆ ಎಂದು ಅವರು ಟೀಕಿಸಿದರು. 2013 ರಲ್ಲಿ ನೀಡಿದ ಎಲ್ಲ ಭರವಸೆಗಳನ್ನು ರಾಜ್ಯ ಸರ್ಕಾರ ಪೂರೈಸಿದ್ದು ಒಂದು ದಾಖಲೆಯೇ ಸರಿ. ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನೀವೆಲ್ಲರೂ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಎ.ಬಿ.ಪಾಟೀಲ, ಮುಖಂಡರಾದ ಜಯಪ್ರಕಾಶ ನಲವಡೆ, ಅಶೋಕ ಅಂಕಲಗಿ, ವಿಜಯ ರವದಿ, ಪ್ರಕಾಶ ದೇಶಪಾಂಡೆ, ಎ.ಕೆ.ಪಾಟೀಲ, ಇರ್ಷಾದ ಮೊಕಾಶಿ, ಚಂದು ಗಂಗಣ್ಣವರ, ಜೀತು ಮರಡಿ, ರಾಜು ಕುರಂದವಾಡೆ ಮತ್ತಿತರರು ಉಪಸ್ಥಿತರಿದ್ದರು.

loading...