ಬಿ.ಎಚ್‌.ಶ್ರೀಧರ ಶತಮಾನೋತ್ಸವದ ಸಂಭ್ರಮದ ಸರಣಿ ಕಾರ್ಯಕ್ರಮಗಳು

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ಶ್ರೇಷ್ಠ ಸಾಹಿತಿ ಬಿ.ಎಚ್‌.ಶ್ರೀಧರ ಅವರಿಗೆ 100 ವರ್ಷಗಳಾಗುತ್ತಿರುವ ಈ ಶತಮಾನೋತ್ಸವದ ಸಂದರ್ಭದಲ್ಲಿ ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ಅನೇಕ ಸಂಸ್ಥೆಗಳನ್ನೊಡಗೂಡಿ ಕೈಗೊಂಡಿದೆ.
ಶ್ರೇಷ್ಠ ಸಾಹಿತಿ ಬಿ.ಎಚ್‌. ಶ್ರೀಧರರು ನವೋದಯ ಕಾಲ ಘಟ್ಟದಲ್ಲಿನ ಪ್ರಮುಖ ಕವಿಗಳೆಂದೂ ಹರಿತ ವಿಮರ್ಶಕರೆಂದೂ ವಿದ್ವಾಂಸರೆಂದೂ ಬೇಂದ್ರೆ, ಕಾರಂತ, ಗೋಕಾಕ, ಮಾಸ್ತಿಗಳಂಥ ಹಿರಿಯ ಸಾಹಿತಿಗಳಿಂದ ಗುರುತಿಸಿಲ್ಪಟ್ಟವರು. ಕನ್ನಡದ ಕವಿವರ್ಯರಾಗಿ, ಪತ್ರಕರ್ತರಾಗಿ, ಹರಿತ ವಿಮರ್ಶಕರಾಗಿ ‘ಕಾವ್ಯಸೂತ್ರ’ ಬಹುಮಾನಿತ ವಿಮರ್ಶಾಗ್ರಂಥ ಹಾಗೂ 50ಕ್ಕೂ ಮಿರಿದ ಮೌಲಿಕ ಗ್ರಂಥಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಉಪನ್ಯಾಸಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿ ಹೆಜ್ಜೆಗುರುತನ್ನು ಮೂಡಿಸಿದವರು. ‘ಪ್ರಚಂಡ’ ಎಂದು ಕವಿ ಬೇಂದ್ರೆಯವರಿಂದ ಎನಿಸಿಕೊಂಡ, ಕಾರಂತರಿಂದ ‘ಮುಗ್ದ ಪ್ರಾಮಾಣಿಕ’ ಸಹೃದಯ ಎನಿಸಿಕೊಂಡ ಬಿ.ಎಚ್‌.ಶ್ರೀಧರರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರು ಏ.24ರಂದು ತೀರಿಹೋದ ನಂತರ 28 ವರ್ಷಗಳಿಂದ ನಾಡಿನ ಶ್ರೇಷ್ಠ ಸಾಹಿತಿಗಳಿಗೆ ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ಪ್ರಶಸ್ತಿ ನೀಡುತ್ತಾ ಬಂದಿದೆ.
ಸಮಿತಿ ವತಿಯಿಂದ ಈಗಾಗಲೇ ಉಡುಪಿ ಜಿಲ್ಲೆಯ ಸಾಹಿತ್ಯ ಸಮ್ಮೇಳನ, ನಾಗೂರಿನಲ್ಲಿ ಶತಮಾನದ ಸ್ಮೃತಿ ಹಬ್ಬ, ಕಾಂತಾವರದಲ್ಲಿ ‘ಬಿ.ಎಚ್‌.ಶ್ರೀಧರ’ ಪುಸ್ತಕ ಬಿಡುಗಡೆ ಸಮಾರಂಭ, ಮೊಗೇರಿಯಲ್ಲಿ ಬಿ.ಎಚ್‌.ಶ್ರೀಧರರ ನೆನಪು ಹಾಗೂ ಶಿರಸಿಯ ಗಣೇಶನಗರದ ಪ್ರೌಢಶಾಲೆಯಲ್ಲಿ ಶ್ರೀಧರರ ಭಾವಗೀತೆಗಳ ಸ್ಪರ್ಧೆ ಮುಂತಾದ ಕಾರ್ಯಕ್ರಮವನ್ನು ನಡೆಸಿದೆ. ಅವರು ಕೆಲಸ ಮಾಡಿದ ಸಂಸ್ಥೆಗಳಲ್ಲೂ ಬಿ.ಎಚ್‌.ಶ್ರೀಧರರ ಕುರಿತು ಹಾಗೂ ಅವರ ಕೃತಿಗಳ ಕುರಿತು ವಿದ್ವಾಂಸರಿಂದ ಭಾಷಣ, ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿಯ ವಿಶೇಷ ಕಾರ್ಯಕ್ರಮಗಳೊಂದಿಗೆ ‘ಶತಮಾನದ ಸ್ಮೃತಿ ಹಬ್ಬ’ ನಡೆಯಲಿದೆ ಎಂದು ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ ಹಾಗೂ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

loading...