ಭೀಮಣ್ಣವರಿಂದ ಶೋಷಣಾ ರಹಿತ ಸಮಾಜ ನಿರ್ಮಾಣ ಸಾಧ್ಯ: ಹೆಗಡೆ

0
20
loading...

ಶಿರಸಿ: ಸಹಕಾರಿ ಕ್ಷೇತ್ರವನ್ನು ಪ್ರತಿನಿಧಿಸುವ ಅಡಕೆ ಬೆಳೆಗಾರ ಭೀಮಣ್ಣ ನಾಯ್ಕವರಿಂದ ಶೋಷಣಾ ರಹಿತ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿಯೇ ಈ ಬಾರಿ ಅಡಕೆ ಬೆಳೆಗಾರರು ಮತ್ತು ಕೃಷಿಕರು ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಹೆಗಡೆ ಕರೆ ನೀಡಿದರು.
ಶಿರಸಿಯ ಸಾಮ್ರಾಟ್‌ ವಿನಾಯಕ ಹಾಲ್‌ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜೆಡಿಎಸ್‌ ಅಭ್ಯರ್ಥಿ ಶಶಿಭೂಷಣ ಹೆಗಡೆ ಮತ್ತವರ ಕುಟುಂಬ ಸಹಕಾರಿ ಕ್ಷೇತ್ರದಲ್ಲಿ ಎಂದೂ ಗುರುತಿಸಿಕೊಂಡಿಲ್ಲ. ಇವರಿಬ್ಬರು ಸಹಕಾರಿ ಕ್ಷೇತ್ರದ ಪ್ರತಿನಿಧಿಗಳಲ್ಲ. ಭೀಮಣ್ಣ ನಾಯ್ಕ ಅಡಿಕೆ ಬೆಳೆಗಾರರು ಹಾಗೂ ಕೃಷಿಕರಾಗಿ ಸಹಕಾರಿ ಕ್ಷೇತ್ರ ಪ್ರತಿನಿಧಿಸುವ ಜೊತೆಗೆ ಅನೇಕ ಬಾರಿ ಅಡಕೆ ಬೆಳೆಗಾರರು ಹಾಗೂ ಕೃಷಿಕರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ರೈತರಿಗೆ ತುಂಬಾ ಸಹಾಯವಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ 5 ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದರೂ ಸಹ ಅಭಿವೃದ್ಧಿ ಶೂನ್ಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರೈತರು, ಅಡಕೆ ಬೆಳೆಗಾರರು, ಕೃಷಿ ಕೂಲಿ ಕಾರ್ಮಿಕರಾದಿಯಾಗಿ ಬಡವರಿಗೆ ಸ್ಪಂದಿಸುವ ವ್ಯಕ್ತಿಯಾದ ಭೀಮಣ್ಣ ನಾಯ್ಕ ಇವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಸಿದ ರೋಡ್‌ ಶೋ ಹಾಗೂ ಸಭೆಗಳಿಂದ ಎಲ್ಲಾ ಕಾರ್ಯಕರ್ತರು, ನಾಯಕರುಗಳಲ್ಲಿ ವಿಶ್ವಾಸ ಹೆಚ್ಚಾಗಿದೆ. ಜಿಲ್ಲೆಯಲ್ಲಿನ 6 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದು, ಎಲ್ಲರೂ ಸೇರಿ ಶ್ರಮಿಸಲಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರದಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಇದರಿಂದ ನಮಗೆ ಜನಾಶೀರ್ವಾದ ದೊರೆಯಲಿದೆ ಎಂದ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಿರಸಿ-ಸಿದ್ದಾಪುರ ಕ್ಷೇತ್ರದ ಟಿಕೇಟ್‌ ಆಕಾಂಕ್ಷಿ ನಿವೇದಿತ್‌ ಆಳ್ವಾ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಜಿ.ವಿ.ಕುಚಿನಾಡ, ಹಿರಿಯ ಸಹಕಾರಿ ಜಿ.ಟಿ.ಹೆಗಡೆ ತಟ್ಟೀಸರ, ಪ್ರಮುಖರಾದ ರಮೇಶ ದುಭಾಶಿ, ದೀಪಕ ದೊಡ್ಡುರು, ವೆಂಕಟೇಶ ಹೆಗಡೆ, ಪ್ರವೀಣ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...