ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ನಾಗರಾಜ

0
24
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಇಂದಿನ ವಿದ್ಯಾರ್ಥಿಗಳು ಸದಾ ಮೊಬೈಲ್‌, ಪೇಸ್‌ಬುಕ್‌, ವಾಟ್ಸಪ್‌, ಇಂಟರ್‌ನೆಟ್‌ ಮತ್ತು ಟಿ.ವಿ.ಯ ಮುಂದೆ ಕಾಲಹರಣ ಮಾಡಿ, ತಮ್ಮ ಉತ್ತಮ ಭವಿಷ್ಯವನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತಿದೆ. ಅದಕ್ಕಾಗಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಇಂತಹ ಶಿಬಿರಗಳು ತೀರಾ ಅಗತ್ಯವಾಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಮದ್ಗುಣಿ ಹೇಳಿದರು.
ಅವರು ಗುರುವಾರ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ರಂಗ ಸಹ್ಯಾದ್ರಿ ಸಂಸ್ಥೆ ಹಮ್ಮಿಕೊಂಡ “ಮಕ್ಕಳ ಬೇಸಿಗೆ ಶಿಬಿರ” ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರದ ಕೊರತೆ ತೀರಾ ಇದೆ. ಕಲೆ, ಸಾಹಿತ್ಯ, ಸಂಗೀತದಂತಹ ಆರಾಧನೆಗಳ ಸಂಸ್ಕಾರ ಚಿಕ್ಕ ಮಕ್ಕಳಿರುವಾಗಿಂದಲೇ ದೊರೆತರೆ ಸಜ್ಜನ ನಾಗರಿಕರಾಗುವುದಕ್ಕೆ ಸಾಧ್ಯ. ಅದರಲ್ಲೂ ಬದಲಾದ ಕಾಲಘಟ್ಟದ ರಜೆ ಕಾಲದಲ್ಲಿ ಮಕ್ಕಳನ್ನು ನಿಯಂತ್ರಿಸುವುದೇ ಪಾಲಕರಿಗೆ ದುಸ್ಸಾಧ್ಯವಾಗುತ್ತಿದೆ. ಹತ್ತಾರು ವರ್ಷಗಳಿಂದ ರಂಗ ಸಹ್ಯಾದ್ರಿ ಅಡಿಯಲ್ಲಿ ಡಿ.ಎನ್‌.ಗಾಂವ್ಕರ್‌ ತಂಡ ಉತ್ತಮ ಕಾರ್ಯ ಮಾಡುತ್ತಿದೆ. ಈ ಶಿಬಿರದಲ್ಲಿ ಆಟ, ಓಟ, ನಾಟಕ ಸಾಮಾನ್ಯ ಜ್ಞಾನ, ಹಾಡು ಸೇರಿದಂತೆ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗ ಸಹ್ಯಾದ್ರಿ ನಿರ್ದೇಶಕ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಪಂಚದ ಜ್ಞಾನದ ತೀವ್ರ ಕೊರತೆಯಿದೆ. ಅದನ್ನು ನಾವು ಪ್ರತಿವರ್ಷ ನಡೆಸುವ ಶಿಬಿರದಲ್ಲಿ ಸಾಧ್ಯವಾದದ್ದನ್ನು ಉತ್ತಮ ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ನೀಡುತ್ತಿದ್ದೇವೆ. ಕೊನೆಯಲ್ಲಿ ವಿದ್ಯಾರ್ಥಿಗಳಿಂದಲೇ ನಾಟಕ ಪ್ರದರ್ಶನ ನಡೆಸುತ್ತಾ ಬಂದಿದ್ದೇವೆ. ಮತ್ತು ಮಕ್ಕಳಿಗೆ ಪ್ರೇಕ್ಷಣೀಯ ಪ್ರವಾಸವನ್ನೂ ಏರ್ಪಡಿಸಲಾಗುತ್ತಿದೆ. ಪಟ್ಟಣದ ಪಾಲಕರು ಅನೇಕ ವರ್ಷಗಳಿಂದ ಈ ಶಿಬಿರದ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರನ್ನು ಸದಾ ಸ್ಮರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಶಿಬಿರ ಶಿಕ್ಷಕಿ ಪಾರ್ವತಿ ಕಟ್ಟಿಮನಿ, ಪತ್ರಕರ್ತ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಡಿಶ್‌.ಸಿ ನಾಗೇಶ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

loading...