ಮತದಾನ ಪ್ರಮಾಣ ಹೆಚ್ಚಿಸಲು ಆಯೋಗದಿಂದ ಜನಜಾಗೃತಿ

0
18
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಭಾರತದ ಹೆಮ್ಮೆಯ ಕ್ರಿಕೆಟಿಗ ಹಾಗೂ ಕರ್ನಾಟಕದವರೇ ಆದ ರಾಹುಲ್‌ ದ್ರಾವಿಡ್‌ ಹೇಳ್ತಾರೆ ‘ನಾನೂ ಓಟ್‌ ಮಾಡ್ತೇನೆ-ನೀವೂ ತಪ್ಪದೆ ಓಟ್‌ ಮಾಡಿ’ ಪ್ರಜಾಪ್ರಭುತ್ವ ಗೆಲ್ಲಿಸಿ ಅಂತ. ಭಾರತದ ಹತ್ತೊಂಭತ್ತು ವರ್ಷದೊಳಗಿನ ರಾಷ್ಟ್ರೀಯ ಯುವ ಕ್ರಿಕೆಟ್‌ ತಂಡದ ತರಬೇತುದಾರರಾಗಿರುವ ದೇಶದ ಹೆಮ್ಮೆಯ, ಕರ್ನಾಟಕದವರೇ ಆಗಿರುವ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ನೇಮಕ ಮಾಡಿರುವ ಯೂತ್‌ ಐಕಾನ್‌ ಆಗಿದ್ದಾರೆ. ‘ನಾನೂ ಓಟ್‌ ಮಾಡ್ತೇನೆ- ನೀವೂ ತಪ್ಪದೆ ಓಟ್‌ ಮಾಡಿ’ ಪ್ರಜಾ ಪ್ರಭುತ್ವ ಗೆಲ್ಲಿಸಿ ಎಂದು ಕೊಪ್ಪಳ ಜಿಲ್ಲೆಯಲ್ಲಿ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ರಾಹುಲ್‌ ದ್ರಾವಿಡ್‌ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ ಎಂದಲ್ಲ.
ಇದು ಚುನಾವಣಾ ಆಯೋಗವು ಹೊರತರಲಾಗಿರುವ ಪ್ರಚಾರ ಫಲಕಗಳ ಮೇಲೆ ರಾರಾಜಿಸಿ, ಸಾರ್ವಜನಿಕರಿಗೆ ಮತದಾನಕ್ಕೆ ಪ್ರೇರೇಪಣೆ ನೀಡುತ್ತಿರುವುದಾಗಿದೆ. ಜಿಲ್ಲಾಡಳಿತ ಭವನದ ಬಳಿಯ ಕೆಲವು ಪ್ರಚಾರ ಫಲಕಗಳಿಗೆ ರಾಹುಲ್‌ ದ್ರಾವಿಡ್‌ ಅವರ ಮತ ಜಾಗೃತಿ ಸಂದೇಶದ ಮಾಹಿತಿಯನ್ನು ಅಳವಡಿಸಿದ್ದು, ಇದರ ಜೊತೆಗೆ ವಿವಿಧ ಬಗೆಯ ಪೋಸ್ಟರ್‌ಗಳನ್ನು ಮತದಾರರ ಜಾಗೃತಿಗಾಗಿ ಫಲಕಗಳಿಗೆ ಅಳವಡಿಸಲಾಗಿದೆ. ಮತದಾನ ಜಾಗೃತಿಗಾಗಿ ಹಾಗೂ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ನಿಟ್ಟನಲ್ಲಿ ಕಾರ್ಟೂನ್‌ಗಳನ್ನು ಬಳಸಿ ವಿವಿಧ ಸಂದೇಶಗಳುಳ್ಳ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದೆ. ಮತದಾನ ಜಾಗೃತಿಗಾಗಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾದ ಚಿರತೆಯ ಚಿತ್ರ ಹೊಂದಿರುವ ಕೊಪ್ಪಳ ಜಿಲ್ಲೆಯ ‘ಓಟರ್‌ ಕುಮಾರ’ ಲಾಂಛನ ಪ್ರತಿ ಫಲಕಗಳಲ್ಲೂ ರಾರಾಜಿಸುತ್ತಿದೆ.
‘ಪ್ರಜಾ ಪ್ರಭುತ್ವ ನಮ್ಮಿಂದ- ಮತದಾನ ಹೆಮ್ಮೆಯಿಂದ’ ಎನ್ನುವ ಪ್ರಚಾರ ಫಲಕದಲ್ಲಿ ಮತದಾನ ಮಾಡಿದ ಗುರುತಾಗಿ ಬೆರಳಿಗೆ ಶಾಯಿ ಹಾಕಿರುವ ಬೆರಳನ್ನು ತೋರಿಸುತ್ತಿರುವ ಫಲಕ ಆಕರ್ಷಕವಾಗಿದೆ. ‘ನಾನೂ ಓಟ್‌ ಮಾಡ್ತೇನೆ- ನೀವೂ ತಪ್ಪದೆ ಓಟ್‌ ಮಾಡಿ’ ತಪ್ಪದೆ ಮತ ಚಲಾಯಿಸಿ ಎಂದು ನಗೆ ಬೀರುತ್ತಿರುವ ರಾಹುಲ್‌ ದ್ರಾವಿಡ್‌ ಅವರ ಫಲಕ ಇದೀಗ ಕೊಪ್ಪಳ ಜಿಲ್ಲೆಯ ವಿವಿಧೆಡೆ ಯುವಜನರನ್ನು ತನ್ನತ್ತ ಸೆಳೆಯುತ್ತಿದೆ. ಇನ್ನೊಂದು ಫಲಕದಲ್ಲಿ ಮತದಾರನಿಗೆ ಹಣದ ಆಮಿಷವೊಡ್ಡುತ್ತಿರುವ ವ್ಯಕ್ತಿಗಳಿಗೆ, ನಿಮ್ಮ ಹಣ ನನಗೆ ಬೇಕಿಲ್ಲ ಎನ್ನುವಂತೆ ಮತದಾರ ಆಮಿಷವನ್ನು ನಿರಾಕರಿಸುತ್ತಿರುವ ಹಾಗೂ ನೋಟ್‌-ತಪ್ಪು, ಓಟ್‌-ರೈಟ್‌ ಎನ್ನುವ ಸಂದೇಶವನ್ನು ಬಿಂಬಿಸುವ ಕಾರ್ಟೂನ್‌ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.
ಹಣದ ನೋಟನ್ನು ಗಾಳಕ್ಕೆ ಸಿಲುಕಿಸಿ, ಮತದಾರನೆಂಬ ಮೀನಿಗೆ ಗಾಳ ಹಾಕಿರುವ ರಾಜಕಾರಣಿಯ ಚಿತ್ರವುಳ್ಳ ಜಾಹೀರಾತಿನಲ್ಲಿ ‘ಆಮಿಷಕ್ಕೆ ಮರುಳಾಗದಿರಿ, ಯೋಚಿಸಿ ಮತ ಚಲಾಯಿಸಿ’ ಎಂಬ ಸಂದೇಶವನ್ನು ಹೊಂದಿರುವ ಕಾರ್ಟೂನ್‌ ಚಿತ್ರದ ಫಲಕ ನಿಜಕ್ಕೂ ಮತದಾರನಿಗೆ ಒಳ್ಳೆಯ ಸಂದೇಶವನ್ನೇ ನೀಡುತ್ತಿದೆ. ಇಂತಹ ಜಾಹೀರಾತು ಫಲಕಗಳು ಶೀಘ್ರದಲ್ಲಿಯೇ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಾರಾಜಿಸಲಿದ್ದು, ಮತದಾರನನ್ನು ಜಾಗೃತಗೊಳಿಸುವಲ್ಲಿ ಪರಿಣಾಮ ಬೀರಲಿದೆ.

ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮತದಾರರ ಜಾಗೃತಿಗೆ ಯುವಜನರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧನೆ, ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಸ್ವೀಪ್‌ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಯುವಜನತೆ, ವಿದ್ಯಾರ್ಥಿ ಸಮೂಹ, ಸಾರ್ವಜನಿಕರ ಸ್ಪಂದನೆ ಸಿಕ್ಕಿದೆ. ಎಲ್ಲ ಮತದಾರರು ಮೇ. 12 ರಂದು ತಪ್ಪದೆ ತಮ್ಮ ಮತದಾನ ಚಲಾಯಿಸುವ ಮೂಲಕ ಮತದಾನದ ಪ್ರಮಾಣ ಹೆಚ್ಚಳಗೊಂಡಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತದ ಶ್ರಮ ಸಾರ್ಥಕವಾಗಲಿದೆ.
-ವೆಂಕಟ್‌ ರಾಜಾ, ಜಿಪಂ ಸಿಇಒ

loading...