ಮತದಾನ ಮಾಹಿತಿ, ಜಾಗೃತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ

0
27
loading...

ಕನ್ನಡಮ್ಮ ಸುದ್ದಿ-ಕುಮಟಾ: ವಿಧಾನಸಭಾ ಚುನಾವಣೆ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಪಾರದರ್ಶಕವಾಗಿ ನಡೆಯಬೇಕೆಂಬ ಉz್ದೇಶದಿಂದ ಮತದಾರನ ಮತದಾನ ಖಾತ್ರಿ ಪಡಿಸಲು ವಿವಿಪ್ಯಾಟ್‌ ಯಂತ್ರವನ್ನು ಈ ಬಾರಿ ಬಳಸಲಾಗುತ್ತಿದೆ ಎಂದು ಸೆಕ್ಟರ್‌ ಅಧಿಕಾರಿ ರಾಮದಾಸ ಆಚಾರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ವಿವೇಕನಗರದಲ್ಲಿರುವ ಶಾರದಾನಿಲಯ ಶಾಲೆಯಲ್ಲಿ ವಿಧಾನಸಭಾ ಚುನಾವಣೆಯ ನಿಮಿತ್ತ ನಡೆದ “ಮತದಾನ ಮಾಹಿತಿ ಹಾಗೂ ಜಾಗೃತಿ ಪ್ರಾತ್ಯಕ್ಷಿಕೆ” ಕಾರ್ಯಕ್ರಮದಲ್ಲಿ ನಾಗರಿಕರಿಗೆ ಮಾಹಿತಿ ನೀಡಿದರು.
ಸಾವಿರಾರು ಮತಗಳ ಪರೀಕ್ಷೆಯೊಂದಿಗೆ ಹಲವು ಬಾರಿ ತಂತ್ರಜ್ಞರಿಂದ ತಪಾಸಿಸಲ್ಪಟ್ಟು ಮತದಾನಕ್ಕೆ ಬಳಸಲಾಗುವ ಈ ಯಂತ್ರಗಳು, ಸ್ವಯಂ ಪರೀಕ್ಷಾ ಸಾಮರ್ಥ್ಯವನ್ನೂ ಹೊಂದಿವೆ. ಒಮ್ಮೆ ಸೀಲ್‌ಬಂದ್‌ ಮಾಡಿದ ಯಂತ್ರಗಳಲ್ಲಿ ಯಾವುದೇ ತೆರನಾದ ತಾಂತ್ರಿಕ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ. ಮತದಾರನು ತಾನು ಗುಂಡಿ ಒತ್ತಿದ ಅಭ್ಯರ್ಥಿಗೆ ಅಥವಾ ಪಕ್ಷದ ಗುರುತಿಗೆ ಮತವು ದಾಖಲಾದ ಬಗೆಗೆ 7 ಸೆಕೆಂಡುಗಳ ಕಾಲ ವಿವಿಪ್ಯಾಟ್‌ ಯಂತ್ರದಲ್ಲಿ ಮುದ್ರಿತ ಹಾಳೆಯನ್ನು ವೀಕ್ಷಿಸಿ ಖಚಿತಪಡಿಸಿಕೊಳ್ಳಬಹುದು ಎಂದು ವಿವರಿಸಿದರು. ಅಲ್ಲದೆ ಕ್ಷೇತ್ರದಲ್ಲಿ ಪ್ರತಿನಿತ್ಯ ಹತ್ತಕ್ಕೂ ಅಧಿಕ ಮತಗಟ್ಟೆಗಳಲ್ಲಿ ಇದೇ ರೀತಿ ಪ್ರಾತ್ಯಕ್ಷಿಕೆಯ ಮೂಲಕ ಖಾತ್ರಿ ಮತದಾನದ ಅರಿವು ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಪ್ರೆರೇಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ನಂತರ ಸಹಾಯಕ ಅಧಿಕಾರಿಗಳಾದ ಆರ್‌ ಎಸ್‌ ಶಾನಭಾಗ ಹಾಗೂ ತಿರುಮಲ ಡಿ ನಾಯ್ಕ ಸಹಕಾರದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಎಲ್ಲಾ ಯಂತ್ರಗಳ ಬಳಕೆಯನ್ನು ಹಾಗೂ ಮತದಾನ ಖಾತ್ರಿ ಪಡಿಸಿಕೊಳ್ಳುವಿಕೆಯನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಗರಿಕರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸ್ಥಳಿಯ ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಮತದಾನದ ಮಾಹಿತಿ ಪಡೆದುಕೊಂಡರು.

loading...